ADVERTISEMENT

ತುಮಕೂರು | ತುಮುಲ್ ನೇಮಕಾತಿಯಲ್ಲಿ ಅಕ್ರಮ; ಆರೋಪ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 13:40 IST
Last Updated 13 ಜುಲೈ 2023, 13:40 IST
ಡೇರಿಗೆ ಹಾಲು ಸುರಿಯುತ್ತಿರುವುದು (ಸಾಂದರ್ಭೀಕ ಚಿತ್ರ)
ಡೇರಿಗೆ ಹಾಲು ಸುರಿಯುತ್ತಿರುವುದು (ಸಾಂದರ್ಭೀಕ ಚಿತ್ರ)   

ತುರುವೇಕೆರೆ: ‘ತುಮಕೂರು ಹಾಲು ಒಕ್ಕೂಟದ (ತುಮುಲ್‌) ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಆಡಳಿತ ಮಂಡಳಿ ಅಕ್ರಮ ಎಸಗಿದೆ. ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಟಿಎಪಿಎಂಎಸ್‌ ಮಾಜಿ ಅಧ್ಯಕ್ಷ ಡಿ.ಪಿ.ರಾಜು ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚಿಗೆ ನೇಮಕಾತಿ ಪರೀಕ್ಷೆಯಲ್ಲಿಯೂ ಅಕ್ರಮ ನಡೆದಿದೆ. ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ನಿರ್ದೇಶಕರು ಲಕ್ಷಾಂತರ ರೂಪಾಯಿಗೆ ಹುದ್ದೆಗಳನ್ನು ಮಾರಿಕೊಂಡಿದ್ದಾರೆ’ ಎಂದೂ ಆರೋಪಿಸಿದರು.

ನೆಪಮಾತ್ರಕ್ಕೆ ಪರೀಕ್ಷೆ ನಡೆಸಿದ್ದು, 120 ವಿವಿಧ ಹುದ್ದೆಗಳಿಗೆ 20 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅವರ ಅರ್ಜಿ ಸ್ಲಲಿಕೆಯಿಂದಲೇ ತುಮುಲ್‌ಗೆ ಲಕ್ಷಾಂತರ ರೂಪಾಯಿ ಆದಾಯ ಬಂದಿದೆ ಎಂದರು.

ADVERTISEMENT

‘ಇನ್ನೇನು ಕೆಲವೇ ತಿಂಗಳಲ್ಲಿ ಆಡಳಿತ ಮಂಡಳಿಯ ಅಧಿಕಾರ ಕೊನೆಯಾಗಲಿದ್ದು, ಅಷ್ಟರೊಳಗೆ ನೇಮಕಾತಿಯಿಂದ ಹಣ ಮಾಡುತ್ತಿದ್ದಾರೆ. ಇತ್ತೀಚೆಗೆ ಎಲ್ಲ ಅಭ್ಯರ್ಥಿಗಳಿಗೂ ಪರೀಕ್ಷೆ ನೆಡೆಸಿದ್ದು ಮೊದಲೇ ಆಯ್ಕೆ ಮಾಡಿದ 120 ಅಭ್ಯರ್ಥಿಗಳಿಗೆ ಮಾತ್ರ ಖಾಲಿ ಓಎಂಆರ್ ಶೀಟ್ ಪಡೆದುಕೊಂಡು ಅವರೇ ನೇಮಕಾತಿ ಮಾಡಿಕೊಳ್ಳಲು ಹುನ್ನಾರ ನೆಡೆಸಿದ್ದಾರೆ’ ಎಂದು ದೂರಿದರು.

ತುಮುಲ್ ನೇಮಕಾತಿ ಅಕ್ರಮದ ಬಗ್ಗೆ ಶಾಸಕರು ಹಾಗೂ ಸಹಕಾರ ಸಚಿವ ಕೆ.ಎನ್.ರಾಜಣ್ಣರವರಿಗೂ ಮನವಿ ಸಲ್ಲಿಸಲಾಗುವುದು. ಅಕ್ರಮ ನೇಮಕಾತಿ ಬಗ್ಗೆ ಸೂಕ್ತ ತನಿಖೆ ನಡೆಸಲು ಒತ್ತಾಯಿಸಲಾಗುವುದು ಎಂದು ಹೇಳಿದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್.ಬೋರೇಗೌಡ, ಮುಖಂಡ ಹುಚ್ಚೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.