ADVERTISEMENT

ತಿಪಟೂರು ಜಿಲ್ಲೆಗಾಗಿ ಕಾಲ್ನಡಿಗೆ ಜಾಥಾ

ಆರ್ಥಿಕ, ಶೈಕ್ಷಣಿಕ ಕ್ಷೇತ್ರ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2021, 1:50 IST
Last Updated 27 ಆಗಸ್ಟ್ 2021, 1:50 IST
ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸುವಂತೆ ಒತ್ತಾಯಿಸಿ ಕಾಲ್ನಡಿಗೆ ಜಾಥಾ ನಡೆಯಿತು
ತಿಪಟೂರನ್ನು ಜಿಲ್ಲಾ ಕೇಂದ್ರವಾಗಿಸುವಂತೆ ಒತ್ತಾಯಿಸಿ ಕಾಲ್ನಡಿಗೆ ಜಾಥಾ ನಡೆಯಿತು   

ತಿಪಟೂರು: ತಾಲ್ಲೂಕನ್ನು ಜಿಲ್ಲಾ ಕೇಂದ್ರವಾಗಿಸಲು ಒತ್ತಾಯಿಸಿ ಗುರುವಾರ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು.

ನಗರದ ಕೆಂಪಮ್ಮದೇವಿ ದೇವಾಲಯದಿಂದ ಉಪವಿಭಾಗಾಧಿಕಾರಿ ಕಚೇರಿಯವರಗೆ ಕೆ.ಟಿ.ಶಾಂತಕುಮಾರ್ ಅಭಿಮಾನಿ ಬಳಗ
ದಿಂದ ಜಾಥಾ ನಡೆಸಿ, ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ ಅವರಿಗೆ ಮನವಿ ಸಲ್ಲಿಸಲಾಯಿತು.

ಕೆಪಿಸಿಸಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಾಂತಕುಮಾರ್ ಮಾತನಾಡಿ, ತಾಲ್ಲೂಕಿನ ಜನರ ಬಹುದಿನಗಳ ಕೂಗು ತಿಪಟೂರನ್ನು ಪ್ರತ್ಯೇಕ ಜಿಲ್ಲೆಯಾಗಿಸಬೇಕು ಎನ್ನುವುದಾಗಿದೆ. ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಅರಸೀಕೆರೆ‌ ಒಳಗೊಂಡಂತೆ ಜಿಲ್ಲೆ ಮಾಡಬಹುದು. ತಿಪಟೂರು ಉಪವಿಭಾಗವು ಜಿಲ್ಲಾ ಕೇಂದ್ರದಿಂದ 75 ಕಿ.ಮೀ ದೂರದಲ್ಲಿದ್ದು, ಎಲ್ಲ ಕೆಲಸಕ್ಕೂ ದೂರ ತೆರಳುವುದು ತ್ರಾಸದಾಯಕ ಎಂದರು.

ADVERTISEMENT

ತಿಪಟೂರು ಎಲ್ಲ ಸೌಕರ್ಯ ಹೊಂದಿದ್ದರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಮುನ್ನೆಲೆಗೆ ಬರಲು ಸಾಧ್ಯವಾಗುತ್ತಿಲ್ಲ. ಸುತ್ತಮುತ್ತಲಿನ ಎಲ್ಲ ತಾಲ್ಲೂಕುಗಳಿಗೂ ತಿಪಟೂರು ಕೇಂದ್ರ ಸ್ಥಾನದಲ್ಲಿದ್ದು, ಆರ್ಥಿಕವಾಗಿಯೂ ಸದೃಢವಾಗಿರುವುದರಿಂದ ಇನ್ನೂ ಆರ್ಥಿಕತೆ ಹೆಚ್ಚಿಸುವ ಸಲುವಾಗಿ, ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಮಾಡಲು ಜಿಲ್ಲಾ ಕೇಂದ್ರವಾದರೆ ಪೂರಕ ಎಂದರು.‌‌

ಉಪವಿಭಾಗಾಧಿಕಾರಿ ದಿಗ್ವಿಜಯ ಬೋಡ್ಕೆ ಪ್ರತಿಕ್ರಿಯಿಸಿ, ಮನವಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದರು.

ಜಾಥಾದಲ್ಲಿ ಶಕುನಗಿರಿ ಗೊಲ್ಲರಹಟ್ಟಿ ಗ್ರಾ.ಪಂ.ಸದಸ್ಯ ಶಂಕರ್, ಹೊನ್ನೇನಹಳ್ಳಿ ಷಡಕ್ಷರಿ, ಹೊನ್ನವಳ್ಳಿ ಸಿದ್ದೇಶ್, ಮತ್ತಿಹಳ್ಳಿ ಸತೀಶ್, ಗೊರಗೊಂಡನಹಳ್ಳಿ ಸುದರ್ಶನ್, ದಿನೇಶ್ ಹರಿಸಮುದ್ರ, ಮೋಹನ್ ಬಾಬು, ಹೇಮಂತ್, ರಾಕೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.