ಹುಳಿಯಾರು: ಬಿಸಿಲತಾಪ, ಬಿಸಿಗಾಳಿ ದಿನೇ ದಿನೇ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿದ್ದು ಜನರು ಮನೆಯಿಂದ ಹೊರಗೆ ಬರದ ಸ್ಥಿತಿ ನಿರ್ಮಾಣವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಉಷ್ಣಾಂಶ ಸತತವಾಗಿ ಏರುತ್ತಿದ್ದು 36 ಡಿಗ್ರಿ ಇದ್ದ ಉಷ್ಣಾಂಶ ಸದ್ಯ 41 ಕ್ಕೆ ಏರಿಕೆಯಾಗಿದೆ.
2023 ಸೆಪ್ಟಂಬರ್ ತಿಂಗಳಿನಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದು ಬಿಟ್ಟರೆ ಮತ್ತೆ ಮಳೆಯ ಶಬ್ದವೇ ಕಂಡಿಲ್ಲ. ಭೂಮಿಯೆಲ್ಲಾ ದೂಳುಮಯವಾಗಿದ್ದು ಬಿಸಿಲ ತಾಪಕ್ಕೆ ಭೂಮಿ ಕಾದು ಪಾದರಕ್ಷೆ ಮೆಟ್ಟಿಯೂ ಹೆಜ್ಜೆಯಿಡದಂತಾಗಿದೆ.
ತಂಪು ಪಾನೀಯಗಳಿಗೆ ಬೇಡಿಕೆ: ಬಿಸಿಲ ತಾಪ ಜನವರಿಯಿಂದಲೇ ಏರಿಕೆಯಾಗಿದ್ದು ಜನರು ಐಸ್‌ಕ್ರಿಂ, ತಂಪು ಪಾನೀಯ, ತಣ್ಣನೆಯ ನೀರು, ಮಜ್ಜಿಗೆಯಂತಹ ದ್ರವಗಳತ್ತ ಮುಖ ಮಾಡಿದ್ದಾರೆ. ಬಿಸಿಲ ತಾಪ ಎಷ್ಟಿದೆಯೆಂದರೆ ಪ್ರಿಡ್ಜ್‌ಗಳಿಟ್ಟ ತಂಪು ಪಾನೀಯ ಗಂಟೆಗಟ್ಟಲೇ ಇಟ್ಟರೂ ತಣ್ಣಗಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಹುಳಿಯಾರಿನ ರಂಗನಾಥ ಬೇಕರಿ ಮಾಲೀಕ ಷಣ್ಮುಖಸ್ವಾಮಿ ಹೇಳುತ್ತಾರೆ.
ಬಿಸಿಲ ಝಳದಿಂದ ತತ್ತರಿಸಿದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿರುವುದರಿಂದ ಅವುಗಳಿಗೂ ಬೇಡಿಕೆ ಹೆಚ್ಚಾಗಿದೆ. ವಿಶೇಷವೆಂದರೆ ತೆಂಗಿನ ಸೀಮೆಯಲ್ಲೂ ಎಳನೀರಿನ ಬೆಲೆ ₹50ಕ್ಕೆ ಏರಿಕೆಯಾಗಿದೆ. ಇನ್ನೂ ಮಜ್ಜಿಗೆ, ಮೊಸರು ಬಳಸುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಗಿದೆ.
ಹಣ್ಣು, ಸೊಪ್ಪುಗಳತ್ತ ಜನರ ಚಿತ್ತ: ಬಿಸಿಲಿನ ತೀವ್ರತೆ ಹೆಚ್ಚಾದಂತೆ ವೈದ್ಯರು, ಹವಾಮಾನ ಇಲಾಖೆ ನೀಡುತ್ತಿರುವ ಎಚ್ಚರಿಕೆಯಿಂದ ದ್ರವ ಪದಾರ್ಥಗಳನ್ನು ಹೆಚ್ಚಿಗೆ ಬಳಸುತ್ತಿದ್ದಾರೆ. ಸೊಪ್ಪು, ಕರಬೂಜ, ಕಲ್ಲಂಗಡಿ ಹಣ್ಣು ಹೆಚ್ಚಾಗಿ ಬಳಸುತ್ತಿದ್ದಾರೆ. ಆದರೆ ನೀರಿಲ್ಲದೆ ಹಾಗೂ ಬಿಸಿಲ ತಾಪಕ್ಕೆ ಅವುಗಳು ಸಹ ಉತ್ತಮವಾಗಿ ಹಣ್ಣಾಗದೆ ಬಲಿಯುವ ಮೊದಲೆ ಹಣ್ಣಿನ ಬಣ್ಣ ಬರುತ್ತಿದೆ. ಇನ್ನೂ ತರಕಾರಿಗಳನ್ನು ಕೇಳುವಂತಯೇ ಇಲ್ಲದಾಗಿದ್ದು ಸೊಪ್ಪು ಕಿತ್ತ ಅರ್ಧಗಂಟೆಯಲ್ಲಿಯೇ ಬಾಡಿ ಹೋಗುತ್ತಿದ್ದು ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಬುರತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.