ADVERTISEMENT

ಗಡಿನಾಡಲ್ಲಿ ಕನ್ನಡ ಅಸ್ಮಿತೆ ಗಟ್ಟಿಯಾಗಲಿ: ಎಚ್.ವಿ.ವೆಂಕಟೇಶ್

ವೈ.ಎನ್‌. ಹೊಸಕೋಟೆ ಹೋಬಳಿ ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 6:09 IST
Last Updated 27 ಡಿಸೆಂಬರ್ 2025, 6:09 IST
ಪಾವಗಡ ತಾಲ್ಲೂಕು ವೈ.ಎನ್. ಹೊಸಕೋಟೆಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಎಚ್‌.ವಿ. ವೆಂಕಟೇಶ್ ಉದ್ಘಾಟಿಸಿದರು
ಪಾವಗಡ ತಾಲ್ಲೂಕು ವೈ.ಎನ್. ಹೊಸಕೋಟೆಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಶಾಸಕ ಎಚ್‌.ವಿ. ವೆಂಕಟೇಶ್ ಉದ್ಘಾಟಿಸಿದರು   

ಪಾವಗಡ: ಅನ್ಯಭಾಷಾ ಪ್ರಭಾವ ಹೆಚ್ಚಿರುವ ಗಡಿಭಾಗದಲ್ಲಿ ಕನ್ನಡ ಎಲ್ಲರ ಅಸ್ಮಿತೆಯಾಗಿರಬೇಕು ಎಂದು ಶಾಸಕ ಎಚ್.ವಿ.ವೆಂಕಟೇಶ್ ತಿಳಿಸಿದರು.

ತಾಲ್ಲೂಕಿನ ವೈ.ಎನ್‌. ಹೊಸಕೋಟೆಯಲ್ಲಿ ಗುರುವಾರ ನಡೆದ ಹೋಬಳಿ ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಮತ್ತು ಕನ್ನಡಿಗರ ದೃಢ ಸಂಕಲ್ಪದಿಂದ ಕನ್ನಡದ ಪ್ರಗತಿ ಸಾಧ್ಯ. ಇಂದಿನ ಶಿಕ್ಷಣದಲ್ಲಿ ಇಂಗ್ಲಿಷ್‌ ಅನಿವಾರ್ಯವಾಗಿದೆ. ಗಡಿಭಾಗಗಳಲ್ಲಿ ಅನ್ಯಭಾಷಾ ಪ್ರಭಾವ ಹೆಚ್ಚಾಗಿದೆ. ಇವುಗಳ ನಡುವೆ ಕನ್ನಡ ಉಳಿಯಬೇಕಿರುವುದರಿಂದ ಕನ್ನಡಕ್ಕೆ ಪ್ರತಿಯೊಬ್ಬರೂ ಒತ್ತು ನೀಡಬೇಕು ಎಂದರು.

ADVERTISEMENT

ಸಮ್ಮೇಳನಾಧ್ಯಕ್ಷ ಮಧುಶ್ರೀನಿವಾಸನ್ ಮಾತನಾಡಿ, ‘ಇತರ ಸಾಹಿತ್ಯದಂತೆ ವಿಜ್ಞಾನ ಸಾಹಿತ್ಯ ಬೆಳೆದು ನಮ್ಮಂತವರಿಗೆ ಅವಕಾಶಗಳನ್ನು ದೊರಕಿಸಿಕೊಡುತ್ತಿದೆ. ಪ್ರತಿ ವಿದ್ಯಾರ್ಥಿ ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಪ್ರತಿ ಮನೆಯಲ್ಲಿ ಗ್ರಂಥ ಭಂಡಾರ ರಚಿಸಿಕೊಳ್ಳಬೇಕು’ ಎಂದರು.

ಹೋಬಳಿ ಕಸಾಪ ಅಧ್ಯಕ್ಷ ಹೊ.ಮ.ನಾಗರಾಜು ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ನಡೆಯುವುದರಿಂದ ಆ ಭಾಗದ ಸಮಸ್ಯೆಗಳು, ಕನ್ನಡ ಭಾಷೆ, ನೆಲ, ಜಲ ಸಂಸ್ಕೃತಿಗಿರುವ ಸವಾಲುಗಳು ಬೆಳಕಿಗೆ ಬಂದು ಅವುಗಳ ಪರಿಹಾರಕ್ಕೆ ಅನುಕೂಲವಾಗುತ್ತದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಕಟ್ಟಾನರಸಿಂಹಮೂರ್ತಿ ಮಾತನಾಡಿ, ತಾಲ್ಲೂಕು ಗಡಿ ಪ್ರದೇಶವಾಗಿದ್ದು, ಇಲ್ಲಿ ನಿರಂತರವಾಗಿ ಕನ್ನಡ ಚಟುವಟಿಕೆಗಳು ನಡೆಯಬೇಕಿದೆ. ಸರ್ಕಾರ ಮತ್ತು ಪ್ರಾಧಿಕಾರಗಳು ಹೆಚ್ಚು ಹೆಚ್ಚು ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಹಕರಿಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಸಾಹಿತ್ಯ ಸಮ್ಮೇಳನದಲ್ಲಿ ಹಕ್ಕು ಮಂಡಣೆಯಾಗುವ ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ ಎಂದರು.

ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಎಚ್.ವಿ.ರವಿಕುಮಾರ್ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು. ಎಲ್.ಜಿ.ಹಾವನೂರು ಕಲಾವೇದಿಕೆಯ ಕಲಾ ತಂಡಗಳೊಂದಿಗೆ ಪುರಮೆರವಣಿಗೆ ರಾ.ವಿ.ಪೀ ಪ್ರೌಢಶಾಲೆಯಿಂದ ಪ್ರಾರಂಭಗೊಂಡು ವೇದಿಕೆಯಲ್ಲಿ ಕೊನೆಗೊಂಡಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ನೃತ್ಯಗಳನ್ನು ಪ್ರದರ್ಶಿಸಿದರು.

ಸಮ್ಮೇಳನದಲ್ಲಿ ರಾಜಾ ವಂಶಸ್ಥ ಎಚ್.ಪಿ.ಯಲ್ಲಪನಾಯಕ ಅವರ ಮಹಾದ್ವಾರವನ್ನು ಎನ್.ಆರ್.ಅಶ್ವಥಕುಮಾರ್, ಸ್ವಾತಂತ್ರ ಹೋರಾಟಗಾರ ಇ.ಎಸ್.ವೆಂಕಟೇಶ್ ಗುಪ್ತ ಮಹಾಮಂಟಪವನ್ನು ಇ.ವಿ.ಶ್ರೀಧರ್, ಎಸ್.ನಾರಾಯಣ್ ವೇದಿಕೆಯನ್ನು ಎಚ್.ಕೆ.ನರಸಿಂಹಮೂರ್ತಿ ಉದ್ಘಾಟಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ರೇಣುಕಮ್ಮ, ಶಿಶು ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಉಸ್ಮಾನ್, ಶೇಖರ್ ಬಾಬು, ಕಂದಾಯ ಅಧಿಕಾರಿ ಕಿರಣ್ ಕುಮಾರ್, ಯತಿ ಕುಮಾರ್, ಎಂ.ಗಂಗಾಧರಪ್ಪ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಐ.ಎ.ನಾರಾಯಣಪ್ಪ, ಕೋಶಾದ್ಯಕ್ಷ ಪ್ರಭಾಕರ್, ಪ್ರಮೋದ್ ಕುಮಾರ್, ವಿಶ್ವನಾಥ, ಹೋಬಳಿ ಘಟಕದ ಕಾರ್ಯದರ್ಶಿ ಎಲ್.ರಾಮಲಿಂಗಯ್ಯ, ಕೋಶಾಧ್ಯಕ್ಷ ಪಕೃದ್ಧೀನ್, ಚನ್ನಮಲ್ಲಿಕಾರ್ಜುನ, ಎನ್.ಜಿ.ಶ್ರೀನಿವಾಸ, ಎ.ಒ.ನಾಗರಾಜು, ಆರ್.ಸುದರ್ಶನ್, ದೈಹಿಕ ಶಿಕ್ಷಣ ಶಿಕ್ಷಕ ಎ.ಮಾರಣ್ಣ, ಎಚ್.ನಾಗರಾಜು, ಮಾಲತಿ, ಅಶ್ವಥನಾರಾಯಣ, ಶಿಕ್ಷಕ ಪಿ.ಹರಿಕೃಷ್ಣ, ಮಂಜುನಾಥ, ಎಚ್.ಹನುಮಂತರಾಯ, ಮಲ್ಲೇಶಪ್ಪ, ಇತರರು ಉಪಸ್ಥಿತರಿದ್ದರು.

ವೈ.ಎನ್.ಹೊಸಕೋಟೆ ವೈಶಿಷ್ಟ್ಯ ಗೋಷ್ಠಿ

ಸಾಹಿತಿ ಡಾ.ಕೆ.ವಿ.ಮುದ್ದವೀರಪ್ಪ ಅಧ್ಯಕ್ಷತೆ ವಹಿಸಿದ್ದ ವಿಚಾರಗೋಷ್ಠಿಯಲ್ಲಿ ಪ್ರೇಮಜ್ಯೋತಿ ಅವರು ವೈ.ಎನ್.ಹೊಸಕೋಟೆ ಹೋಬಳಿ ಮಹಿಳಾ ಸಬಲೀಕರಣ ಎಂ.ವಿ.ಅಜಯ್ ಕುಮಾರ್ ಅವರು ವೈ.ಎನ್.ಹೊಸಕೋಟೆ ಹೋಬಳಿಯ ವೈಶಿಷ್ಯ– ಸವಾಲುಗಳು ಮತ್ತು ಪರಿಹಾರ. ಟಿ.ಹನುಮಂತರಾಯ ಅವರು ವೈ.ಎನ್.ಹೊಸಕೋಟೆ ಹೋಬಳಿಯ ಜನಪದ ಕಲೆಗಳು ಕುರಿತು ವಿಚಾರ ಮಂಡಿಸಿದರು. ಕರಿಯಣ್ಣ ನಿಶಾದ ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಜನಪದ ಸಾಹಿತಿ ಸಣ್ಣನಾಗಪ್ಪ ಮಾತನಾಡಿ ಕವಿಗಳು ಸಮಾಜದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಂತಹ ಕವಿತೆಗಳನ್ನು ಕಟ್ಟಬೇಕು. ಅನುಭವ ಮತ್ತು ಪುಸ್ತಕ ಅಧ್ಯಯನಗಳ ಮೂಲಕ ಕವಿತೆಗಳು ಮೂಡಿ ಬರಬೇಕು. ಇತಿಹಾಸವನ್ನು ವರ್ತಮಾನದ ನೆಲೆಗಟ್ಟಿನಲ್ಲಿ ನೋಡಬೇಕು ಎಂದರು.