
ಗುಬ್ಬಿ: ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಒದಗಿಸಿದರೆ ಮಾತ್ರ ಕನ್ನಡ ಮಾಧ್ಯಮಕ್ಕೆ ಹೆಚ್ಚು ಪ್ರೋತ್ಸಾಹ ದೊರೆತು ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದು ಎಂದು ಪಟ್ಟಣದಲ್ಲಿ ಶನಿವಾರ ನಡೆದ 6ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಂಜುಂಡಸ್ವಾಮಿ ಹೇಳಿದರು.
ಸರ್ಕಾರ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಿರುವುದರಿಂದಲೇ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚಲು ಕಾರಣವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಕನ್ನಡ ಸಂಕಷ್ಟಕ್ಕೀಡಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಅಗತ್ಯವಿರುವಷ್ಟು ಶಿಕ್ಷಕರನ್ನು ನೇಮಿಸಿ, ಗುಣಮಟ್ಟದ ಪಠ್ಯ ಅಳವಡಿಸಿ ಸರ್ಕಾರಿ ಕನ್ನಡ ಶಾಲೆಗಳನ್ನು ಬಲಪಡಿಸುವತ್ತ ಗಮನಹರಿಸಬೇಕು. ಗುಬ್ಬಿ ತಾಲ್ಲೂಕು ವೈಭವಯುತವಾದ ಸಾಂಸ್ಕೃತಿಕ, ಸಾಹಿತ್ಯಿಕ, ಐತಿಹಾಸಿಕ ಹಾಲ್ಯಗೂ ರಾಜಕೀಯ ಹಿನ್ನೆಲೆ ಹೊಂದಿದೆ. ಗಂಗರು, ಹೊಯ್ಸಳರು ನಿರ್ಮಾಣ ಮಾಡಿರುವ ಸಾಕಷ್ಟು ದೇವಾಲಯಗಳು ತಾಲ್ಲೂಕಿನಲ್ಲಿ ಅಸ್ತಿತ್ವದಲ್ಲಿರುವುದು ಹೆಮ್ಮೆಯ ವಿಚಾರ. ಕನ್ನಡ ಸಾಹಿತ್ಯದ ಮೊದಲ ಕ್ರಾಂತಿ ಕಲ್ಯಾಣದಲ್ಲಾದರೆ ಎರಡನೇ ಕ್ರಾಂತಿ ಗುಬ್ಬಿಯಲ್ಲಿ ನಡೆದಿದೆ ಎಂದರು.
ಗೋಸಲ ಚೆನ್ನಬಸವೇಶ್ವರ, ಗುಬ್ಬಿ ವೀರಣ್ಣ, ಸಾಲುಮರದ ತಿಮ್ಮಕ್ಕ, ಅಮರಗೊಂಡ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ವಿಲಿಯಂ ಅರ್ಥರ್ ಚರ್ಚ್, ಕಡಬ ಹೊಸಕೆರೆ, ಹಾಗಲವಾಡಿ, ಸಿಎಸ್ ಪುರ, ನಿಟ್ಟೂರು ಸೇರಿದಂತೆ ತಾಲ್ಲೂಕಿನ ಎಲ್ಲ ಹೋಬಳಿಗಳಲ್ಲಿಯೂ ಸಾಹಿತ್ಯ, ಸಂಗೀತ, ಶಿಲ್ಪಕಲೆ, ರಂಗಭೂಮಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮಹತ್ತರ ಸಾಧನೆಯನ್ನು ತಾಲ್ಲೂಕಿನಲ್ಲಿ ಕಾಣಲು ಸಾಧ್ಯವಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.
ಕೋಡಿಹಳ್ಳಿ ಮಠದ ಬಸವ ಬೃಂಗೇಶ್ವರ ಸ್ವಾಮಿಜಿ ಗುಬ್ಬಿಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೊಡುಗೆ ಅಪಾರವಾದದ್ದು. ಬೀದರ್‌ನಂತಹ ದೂರದ ಊರಿನಲ್ಲಿಯೂ ಗುಬ್ಬಿಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೊಡುಗೆ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬರುತ್ತವೆ ಎಂದರು.
ಸಾಹಿತಿ ಎಣ್ಣೆಕಟ್ಟೆ ಚಿಕ್ಕಣ್ಣ ಮಾತನಾಡಿ, ಹೇಳೂರು, ಆಗಲವಾಡಿ ಭಾಗದ ಜಾನಪದ ಬುಡಕಟ್ಟು ಸಂಸ್ಕೃತಿ ತಾಲ್ಲೂಕಿನ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದೆ. ಬುಡಕಟ್ಟು ಜನಾಂಗದ ಜುಂಜುಪ್ಪನಂತಹ ಸಾಂಸ್ಕೃತಿಕ ನಾಯಕನ ಬಗ್ಗೆ 19 ಸಂಶೋಧನಾ ಪ್ರಬಂಧಗಳು ಮಂಡನೆಯಾಗಿರುವುದು ಹೆಮ್ಮೆಯ ವಿಚಾರ. ಗುಬ್ಬಿ ಭಾಗದಲ್ಲಿ ನೆಲಮೂಲ ಸಂಸ್ಕೃತಿಯ ಶಕ್ತಿ ದೇವತೆಗಳಾದ ಮನ್ನೆಮ್ಮ, ಆಳದ ಕೊಂಬೆಯಮ್ಮ, ಕಾಲಘಟ್ಟಮ್ಮ ಶಕ್ತಿ ದೇವತೆಗಳ ಅಸ್ತಿತ್ವ ತಾಲ್ಲೂಕಿನ ನೆಲಮೂಲ ಸಂಸ್ಕೃತಿಯ ಹಿರಿಮೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಮ್ಮೇಳನ ಅಧ್ಯಕ್ಷರನ್ನು ಚೆನ್ನಬಸವೇಶ್ವರನ ದೇವಾಲಯದಿಂದ ಬೆಳ್ಳಿರಥದಲ್ಲಿ ಮೆರವಣಿಗೆಯಲ್ಲ ತರಲಾಯಿತು. ತಾಲ್ಲೂಕಿನ ವಿವಿಧ ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಜೊತೆಗೆ ಸ್ಮರಣ ಸಂಚಿಕೆ ‘ಕಲ್ಪವೃಕ್ಷ’ ಬಿಡುಗಡೆ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿದರು. ತಹಶೀಲ್ದಾರ್ ಆರತಿ ಬಿ., ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುಳಾದೇವಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಯತೀಶ್, ಲಕ್ಷ್ಮಣ್ ದಾಸ್, ಎಚ್.ಕೆ. ನರಸಿಂಹ ಮೂರ್ತಿ, ಜಗನ್ನಾಥ, ಪ್ರಾಧ್ಯಾಪಕ ಗೋವಿಂದರಾಜು ಎಂ. ಕಲ್ಲೂರು, ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕನ್ನಡಪರ ಮತ್ತು ವಿವಿಧ ಸಂಘಟನೆ ಪದಾಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು, ಸದಸ್ಯರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.
ಹೇಮೆ ನೀರು ರಂಗಭೂಮಿಯ ಚರ್ಚೆ
ತಾಲ್ಲೂಕಿಗೆ ವರದಾನವಾಗಿರುವ ಹೇಮಾವತಿ ನೀರಿನ ವಿಚಾರದಲ್ಲಿ ಜನರು ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುವುದು ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ಎಚ್ಚರಿಸಿದರು. ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು ಬರಪೀಡಿತ ತಾಲ್ಲೂಕಾಗಿದ್ದ ಗುಬ್ಬಿ ಹೇಮೆಯ ನೀರಿನಿಂದಾಗಿ ಸುಭಿಕ್ಷವಾಗಿರಲು ಸಾಧ್ಯವಾಗಿದೆ. ಯಾವುದೇ ನೀರಾವರಿ ಯೋಜನೆಗಳನ್ನು ತೆರೆದ ಕಾಲುವೆ ಮೂಲಕ ತೆಗೆದುಕೊಂಡು ಹೋದಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿ. ಆದರೆ ರಾಮನಗರ ಭಾಗಕ್ಕೆ ಬೃಹತ್ ಪೈಪ್‌ಗಳ ಮೂಲಕ ನೀರು ಕೊಂಡೊಯ್ಯಲು ಪ್ರಯತ್ನಿಸುತ್ತಿರುವುದು ಅವೈಜ್ಞಾನಿಕ. ಇದರಿಂದಾಗಿ ತುಮಕೂರು ಜಿಲ್ಲೆಗೆ ಅದರಲ್ಲಿಯೂ ಗುಬ್ಬಿ ತಾಲ್ಲೂಕಿಗೆ ಸಾಕಷ್ಟು ಅನ್ಯಾಯವಾಗುವುದು ಎಂದರು. ಪ್ರಾಧ್ಯಾಪಕಿ ಅರುಣಕುಮಾರಿ ಮಾತನಾಡಿ ಸ್ತ್ರೀ ಸಬಲೀಕರಣಕ್ಕೆ ಆದ್ಯತೆ ನೀಡುತ್ತಿದ್ದರೂ ಸಾಮಾಜಿಕವಾಗಿ ಅಗತ್ಯವಿರುವ ಸ್ವಾತಂತ್ರ್ಯ ಪಡೆಯಲು ಸಾಧ್ಯವಾಗಿಲ್ಲ. ಮಹಿಳೆ ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳ್ಳುವ ಜೊತೆಗೆ ಅಗತ್ಯ ಶಿಕ್ಷಣ ಪಡೆದು ಸ್ವಾವಲಂಬಿ ಬದುಕಿನತ್ತ ಗಮನ ಹರಿಸಬೇಕಿದೆ ಎಂದರು. ಗುಬ್ಬಿ ಕಂಪನಿ ರಂಗಭೂಮಿ ಕುರಿತು ಮಾತನಾಡಿದ ಲಕ್ಷ್ಮಣದಾಸ್ ಗುಬ್ಬಿ ಕಂಪನಿಯಿಂದಾಗಿಯೇ ಅನೇಕ ಮಹಾನ್ ಕಲಾವಿದರು ಈ ನಾಡಿಗೆ ಪರಿಚಯವಾಗಲು ಸಾಧ್ಯವಾಯಿತು. ಗುಬ್ಬಿಯ ಹೆಸರನ್ನು ರಂಗಭೂಮಿ ಕ್ಷೇತ್ರದಲ್ಲಿ ವಿಶ್ವಮಟ್ಟಕ್ಕೆ ಬೆಳೆಸಲು ವೀರಣ್ಣ ಕೊಡುಗೆ ಅಪಾರ ಎಂದರು. ಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲ ಲೀಲಾವತಿ ಶೀಲಾ ರುದ್ರೇಶ್ ಜಗದೀಶ್ ಹರೀಶ್ ದಯಾನಂದ ಸರಸ್ವತಿ ದೇವರಾಜು ನೂರಾರು ಸಾಹಿತ್ಯಾಸತ್ತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.