ADVERTISEMENT

ನಾಡಧ್ವಜ ಸ್ತಂಭ ತೆರವು: ಕರವೇ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 16:17 IST
Last Updated 3 ಮಾರ್ಚ್ 2025, 16:17 IST
ಕೊರಟಗೆರೆ ಮುಖ್ಯರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಇದ್ದ ನಾಡ ಧ್ವಜಸ್ತಂಭ ತೆರವುಗೊಳಿಸಿರುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಕೊರಟಗೆರೆ ಮುಖ್ಯರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಇದ್ದ ನಾಡ ಧ್ವಜಸ್ತಂಭ ತೆರವುಗೊಳಿಸಿರುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಕೊರಟಗೆರೆ: ಪಟ್ಟಣದ ಮುಖ್ಯ ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಎದುರು ನಿರ್ಮಾಣ ಮಾಡಲಾಗಿದ್ದ ಕನ್ನಡ ಧ್ವಜಸ್ತಂಭವನ್ನು ತಾಲ್ಲೂಕು ಆಡಳಿತ ತೆರವು ಮಾಡಿರುವುದನ್ನು ಖಂಡಿಸಿ ಕರವೇ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪ ಸಮಾವೇಶಗೊಂಡ ಕಾರ್ಯಕರ್ತರು ಸರ್ಕಾರ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ದಿಕ್ಕಾರ ಕೂಗಿದರು.

‘ಮುಖ್ಯರಸ್ತೆಯಲ್ಲಿ ನಿರ್ಮಿಸಲಾಗಿದ್ದ ಧ್ವಜಸ್ತಂಭವನ್ನು ಯಾವುದೇ ಮಾಹಿತಿ ನೀಡದೇ ತಾಲ್ಲೂಕು ಕರವೇ ಅಧ್ಯಕ್ಷನನ್ನು ಬಂಧಿಸಿ ಏಕಾಏಕಿ ಪೊಲೀಸ್ ಬಿಗಿ ಬಂದೋಬಸ್ತಿನಲ್ಲಿ ತೆರವು ಮಾಡಿದ್ದರ ಉದ್ದೇಶವಾದರೂ ಏನು? ಇದು ಕನ್ನಡಿಗರಿಗೆ ಮಾಡಿದ ಅವಮಾನ’ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಮಾತನಾಡಿ, ‘ಮೀರ್‌ಸಾಧಿಕ್ ಸಂತತಿ ನಮ್ಮಲ್ಲಿ ಇನ್ನೂ ಉಳಿದಿದೆ ಎಂಬುದಕ್ಕೆ ಇಲ್ಲಿ ಧ್ವಜಸ್ತಂಭ ತೆರವು ಮಾಡಿರುವುದೇ ಸಾಕ್ಷಿ. ನಮ್ಮ ನಾಡಿನ ಧ್ವಜವನ್ನು ನಮ್ಮ ಅಧಿಕಾರಿಗಳೇ ಏಕಾಏಕಿ ತೆರವು ಮಾಡಿ ನಾಡದ್ರೋಹದ ಕೆಲಸ ಮಾಡಿದ್ದಾರೆ. ಕನ್ನಡ ನಾಡಿನ ಬಾವುಟವನ್ನು ತೆರವು ಮಾಡುವುದು ಹೆತ್ತ ತಾಯಿಗೆ ದ್ರೋಹ ಮಾಡಿದಂತೆ’ ಎಂದರು.

‘ತಾಲ್ಲೂಕು ಆಡಳಿತದ ಅಧಿಕಾರಿಗಳು ಹೊರ ರಾಜ್ಯದವರಲ್ಲ. ಕನ್ನಡಿಗರಾಗಿ ಕನ್ನಡ ದ್ವೇಷಿಸುವ ಕೆಲಸ ಮಾಡಿ ನಮ್ಮವರೇ ನಮಗೆ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ. ಗೃಹ ಸಚಿವರ ಕ್ಷೇತ್ರದಲ್ಲಿ ನಾಡ ಧ್ವಜಸ್ತಂಭ ಹಾನಿ ಮಾಡುತ್ತಾರೆ ಎಂದರೆ ಅದರ ಹೊಣೆಯನ್ನು ಯಾರು ಹೊರಬೇಕು. ತಾಲ್ಲೂಕು ಅಧ್ಯಕ್ಷನನ್ನು ರಾತ್ರಿ ವೇಳೆ ಬಂಧಿಸಿ ಅಹೋರಾತ್ರಿ ಕನ್ನಡ ಧ್ವಜಸ್ತಂಭ ತೆರವು ಮಾಡಿದ್ದು ಕನ್ನಡಿಗರಿಗೆ ಮಾಡಿದ ಅವಮಾನ’ ಎಂದರು.

‘ಯಾರು ತಪ್ಪು ಮಾಡಿದ್ದಾರೆ ಅವರೇ ಆ ತಪ್ಪನ್ನು ಸರಿ ಮಾಡಬೇಕು. ತಾಲ್ಲೂಕು ಆಡಳಿತ ಕೂಡಲೇ ಕನ್ನಡ ಬಾವುಟದ ಧ್ವಜಸ್ತಂಭ ಸ್ಥಾಪನೆಗೆ ಜಾಗ ಗುರುತಿಸಿ ಶೀಘ್ರವಾಗಿ ಸ್ಥಾಪನೆ ಮಾಡುವ ಮೂಲಕ ಮಾಡಿದ ತಪ್ಪಿಗೆ ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.

ಕರವೇ ಮುಖಂಡ ಧರ್ಮರಾಜ್, ಸಣ್ಣಿರಪ್ಪ, ರಂಗಶಾಮಣ್ಣ, ಶಿವಕುಮಾರ್, ವೀರಭದ್ರಣ್ಣ, ಪುಟ್ಟೇಗೌಡ, ಮಂಜುನಾಥಗೌಡ, ಮೋಹನ್ ಗೌಡ, ಮಲ್ಲಿ, ಸುನಿತಾ ಮೂರ್ತಿ, ಕೆ.ಎನ್.ನಟರಾಜು, ಸಯದ್ ಸೈಫ್ ಉಲ್ಲಾ, ದತ್ತಾತ್ರೇಯ, ದಾಡಿ ವೆಂಕಟೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.