ADVERTISEMENT

ಶಿರಾ: ಉಗ್ರೇಶ್‌ಗೆ ಒಲಿದ ಜೆಡಿಎಸ್ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 6:14 IST
Last Updated 2 ಏಪ್ರಿಲ್ 2023, 6:14 IST
ಆರ್. ಉಗ್ರೇಶ್
ಆರ್. ಉಗ್ರೇಶ್   

ಶಿರಾ: ಶಿರಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಆರ್. ಉಗ್ರೇಶ್ ಅವರನ್ನು ಆಯ್ಕೆ ಮಾಡಲಾಗಿದ್ದು, ಬಿ.ಎಸ್. ಸತ್ಯಪ್ರಕಾಶ್ ಅವರನ್ನು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಶನಿವಾರ ಶಿರಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು ಹಾಗೂ ಮುಖಂಡರ ಸಭೆ ನಡೆಸಿ ಅಭ್ಯರ್ಥಿಯ ಆಯ್ಕೆಯನ್ನು ಎಚ್‌ಡಿಕೆ ಘೋಷಿಸಿದರು.

ಕುಮಾರಸ್ವಾಮಿ ಅವರನ್ನು ಶಿರಾ ಕ್ಷೇತ್ರದಿಂದ ಸ್ವರ್ಧಿಸುವಂತೆ ಶುಕ್ರವಾರ ಟಿಕೆಟ್ ಆಕಾಂಕ್ಷಿಗಳಾಗಿದ್ದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಉಗ್ರೇಶ್, ತುಮುಲ್ ನಿರ್ದೇಶಕ ಎಸ್.ಆರ್. ಗೌಡ, ಜಿ.ಪಂ‌ ಮಾಜಿ ಸದಸ್ಯ ಸಿ.ಆರ್. ಉಮೇಶ್, ಕಲ್ಕೆರೆ ರವಿಕುಮಾರ್, ಶ್ರೀರಾಮೇಗೌಡ, ಬಿ.ಎಸ್. ಸತ್ಯಪ್ರಕಾಶ ಅವರು ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ನಡೆಸಿ ಒತ್ತಾಯಿಸಿದ್ದರು.

ADVERTISEMENT

ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದ ಕಾರಣ ಅಭ್ಯರ್ಥಿ ಆಯ್ಕೆ ಗೊಂದಲದ ಗೂಡಾಗಿ ತೀವ್ರ ಕುತೂಹಲ ಮೂಡಿಸಿತ್ತು. ತೀವ್ರ ಚರ್ಚೆಯ ನಂತರ ತಾಲ್ಲೂಕು ಘಟಕದ ಅಧ್ಯಕ್ಷ ಉಗ್ರೇಶ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಚುನಾವಣೆಯಲ್ಲಿ ಎಲ್ಲರೂ ಒಮ್ಮತದಿಂದ ಕೆಲಸ ಮಾಡಿ ನಾನೇ ಅಭ್ಯರ್ಥಿ ಎಂದು ಗೆಲ್ಲಿಸಿಕೊಂಡು ಬರುವಂತೆ ಎಚ್‌ಡಿಕೆ ಸೂಚನೆ ನೀಡಿದರು.

ಕ್ಷೇತ್ರದಲ್ಲಿ 1989ರಿಂದ ಇದುವರೆಗೂ ಮಾಜಿ ಸಚಿವ ಬಿ. ಸತ್ಯನಾರಾಯಣ ಹಾಗೂ ಅವರ ಕುಟುಂಬಕ್ಕೆ ಜೆಡಿಎಸ್ ಟಿಕೆಟ್ ನೀಡಲಾಗುತ್ತಿತ್ತು. ಸತ್ಯನಾರಾಯಣಗೆ ಸತತವಾಗಿ ಏಳು ಬಾರಿ ಟಿಕೆಟ್ ನೀಡಿದ್ದು ಮೂರು ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಅವರ ಅಕಾಲಿಕ ನಿಧನದಿಂದ 2020ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಅಮ್ಮಾಜಮ್ಮ ಅವರಿಗೆ ಟಿಕೆಟ್ ನೀಡಲಾಗಿತ್ತು. 34 ವರ್ಷಗಳ ನಂತರ ಈಗ ರೈತ ಕುಟುಂಬದಿಂದ ಬಂದ ಸಾಮಾನ್ಯ ಕಾರ್ಯಕರ್ತ ಆದಲೂರು ಗ್ರಾಮದ ಆರ್. ಉಗ್ರೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.

ಚುನಾವಣೆಯಲ್ಲಿ ಒಮ್ಮತ ಮೂಡಿಸುವ ಉದ್ದೇಶದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸತ್ಯನಾರಾಯಣ ಅವರ ಪುತ್ರ ಬಿ.ಎಸ್. ಸತ್ಯಪ್ರಕಾಶ್ ಅವರನ್ನು ತಾಲ್ಲೂಕು ಘಟಕದ ಅಧ್ಯಕ್ಷರಾಗಿ ನೇಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.