
ತುಮಕೂರು: ರಾಜ್ಯದ ವಿವಿಧ ಕಡೆಯ ಸ್ಪರ್ಧಿಗಳು, ನಗರದಲ್ಲಿ ಶುಕ್ರವಾರ ಆರಂಭವಾಗುವ ಕರ್ನಾಟಕ ಒಲಿಂಪಿಕ್ಸ್‌ನಲ್ಲಿ ಸಾಮರ್ಥ್ಯ ತೋರಲು ಸಜ್ಜಾಗಿದ್ದಾರೆ. ಈ ಕೂಟವು ಇದೇ 22ರವರೆಗೆ ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಹಾಗೂ ಇತರ ಕಡೆಗಳಲ್ಲಿ ನಡೆಯಲಿದೆ.
ಪುರುಷರ ವಿಭಾಗದಲ್ಲಿ 1,900 ಮಂದಿ, ಮಹಿಳಾ ವಿಭಾಗದಲ್ಲಿ 1,700 ಸ್ಪರ್ಧಿಗಳು, 500 ಮಂದಿ ಕ್ರೀಡಾ ತಾಂತ್ರಿಕ ಸಿಬ್ಬಂದಿ ಸೇರಿದಂತೆ ಸುಮಾರು 4 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಎಲ್ಲರಿಗೂ ಗಾಜಿನ ಮನೆಯಲ್ಲಿ ಊಟ ಹಾಗೂ ಇತರೆಡೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ಜಿಲ್ಲಾಡಳಿತದ ವತಿಯಿಂದ ಈ ಕೂಟ ಹಮ್ಮಿಕೊಳ್ಳಲಾಗಿದೆ. ಒಟ್ಟು 27 ಕ್ರೀಡೆಗಳ ಪೈಕಿ ಐದು ಕ್ರೀಡೆಗಳು ಬೆಂಗಳೂರಿನಲ್ಲಿ, ಉಳಿದ 22 ಕ್ರೀಡೆಗಳು ತುಮಕೂರಲ್ಲಿ ನಡೆಯಲಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಧ್ಯಾಹ್ನ 3.30ಕ್ಕೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಜಿ.ಪರಮೇಶ್ವರ ಭಾಗವಹಿಸಲಿದ್ದಾರೆ.
ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್‌ಬಾಲ್, ಬಾಕ್ಸಿಂಗ್, ಕೆನೋಯಿಂಗ್ ಮತ್ತು ಕಯಾಕಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್‍ಬಾಲ್, ಜಿಮ್ನಾಸ್ಟಿಕ್, ಹ್ಯಾಂಡ್‍ಬಾಲ್, ಜೂಡೊ, ಕಬ್ಬಡ್ಡಿ, ಕೊಕ್ಕೊ, ಟೆನಿಸ್, ನೆಟ್‍ಬಾಲ್, ಟೇಬಲ್ ಟೆನಿಸ್, ಟೇಕ್ವಾಂಡೊ, ವಾಲಿಬಾಲ್, ವೇಟ್‌ಲಿಫ್ಟಿಂಗ್, ಕುಸ್ತಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.