ADVERTISEMENT

ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ರಾಯಭಾರಿ: ವಿಪಕ್ಷ ನಾಯಕ ಆರ್. ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2023, 9:48 IST
Last Updated 26 ನವೆಂಬರ್ 2023, 9:48 IST
ಸಚಿವ ಆರ್. ಅಶೋಕ
ಸಚಿವ ಆರ್. ಅಶೋಕ   

ಶಿರಾ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭ್ರಷ್ಟಾಚಾರದ ರಾಯಭಾರಿಯಾಗಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಆರ್.ಆಶೋಕ ಟೀಕಿಸಿದರು.

ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಹಳ್ಳಿ ಗ್ರಾಮದಲ್ಲಿ ಭಾನುವಾರ ಬರ ಅಧ್ಯಯನ ನಡೆಸಿ ಮಾತನಾಡಿದರು.

ಈ ಹಿಂದೆ ಲೋಕಾಯುಕ್ತ ಸಂಸ್ಥೆ ರದ್ದು ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ತಳಪಾಯ ಹಾಕಿದ್ದರು. ಈಗ ಡಿ.ಕೆ.ಶಿವಕುಮಾರ್‌ ಅವರ ಸಿಬಿಐ ತನಿಖೆ ರದ್ದು ಪಡಿಸಿ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದ್ದಾರೆ. ಸಂಪುಟ ಸಭೆಯ ತೀರ್ಮಾನ ನ್ಯಾಯಾಲಯದ ತೀರ್ಪುಗಳಿಗಿಂತ ಹೆಚ್ಚೇ? ಎಂದು ಪ್ರಶ್ನಿಸಿದರು.

ADVERTISEMENT

ಜಾತಿ ಗಣತಿಗೆ ಬಿಜೆಪಿ ಎಂದೂ ವಿರೋಧ ಮಾಡುವುದಿಲ್ಲ. ಆದರೆ ಸಿದ್ದರಾಮಯ್ಯ ಜಾತಿ, ಜಾತಿಗಳನ್ನು ಎತ್ತಿ ಕಟ್ಟುವ ಮೂಲಕ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಹಿಂದೆ ಅಧಿಕಾರದಲ್ಲಿದ್ದ ಸಮಯದಲ್ಲಿ ಲಿಂಗಾಯತ, ವೀರಶೈವ ಎಂದು ಜಾತಿ ಹೊಡೆಯುವ ಕೆಲಸ ಮಾಡಿದ್ದರು. ಈ ಬಾರಿ ಜಾತಿ ಗಣತಿ ಹೆಸರಿನಲ್ಲಿ ಸಮಾಜ ಹೊಡೆಯುವ ಕೆಲಸ‌ ಮಾಡುತ್ತಿದ್ದಾರೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅವರ ಸಂಪುಟದ ಸದಸ್ಯರು ಜಾತಿ ಗಣತಿಯ ವರದಿಗೆ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ. ಜಾತಿ ಗಣತಿಯ ವರದಿ ಈಗಾಗಲೇ ಸೋರಿಕೆಯಾಗಿದ್ದು, ವರದಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ತೀವ್ರ ಬರದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಕಾಂಗ್ರೆಸ್‌ ನಾಯಕರು ಮಾತ್ರ ಮುಖ್ಯಮಂತ್ರಿ ಸ್ಥಾನ ಪಡೆಯಲು ಔತಣಕೂಟಗಳ್ನು ನಡೆಸುತ್ತಿರುವುದು ನಾಚಿಕೆಗೇಡಿನ ವಿಚಾರ. ಸರ್ಕಾರ ರೈತರಿಗೆ ಬರ ಪರಿಹಾರ ನೀಡದೆ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ರಾಜ್ಯ ಸರ್ಕಾರ ರೈತರ ಹಿತ ಕಾಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.