ADVERTISEMENT

ಶ್ರೇಷ್ಠತೆಯ ವ್ಯಸನದಿಂದ ಹೊರಬನ್ನಿ: ಸಾಹಿತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 3:34 IST
Last Updated 3 ನವೆಂಬರ್ 2021, 3:34 IST
ತುಮಕೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿ ಬಿ.ಸಿ.ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಸಂಘದ ಅಧ್ಯಕ್ಷೆ ವನಮಾಲಾ ಸಂಪತ್ ಕುಮಾರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ರಾಣಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿ ಬಿ.ಸಿ.ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಹಿತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ, ಸಂಘದ ಅಧ್ಯಕ್ಷೆ ವನಮಾಲಾ ಸಂಪತ್ ಕುಮಾರ್, ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ರಾಣಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು   

ತುಮಕೂರು: ಸಾಹಿತಿಗಳು ಶ್ರೇಷ್ಠತೆಯ ವ್ಯಸನದಿಂದ ಹೊರಬರಬೇಕು. ಜನಸಾಮಾನ್ಯರಲ್ಲಿ ಸಾಹಿತ್ಯಾಭಿರುಚಿ ಬೆಳೆಸುವ ಕಡೆ ಯೋಚಿಸಬೇಕಾಗಿದೆ ಎಂದು ಸಾಹಿತಿ ಡಾ.ಕೆ.ಆರ್.ಸಂಧ್ಯಾ ರೆಡ್ಡಿ ಸಲಹೆ ಮಾಡಿದರು.

ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಲೇಖಕಿಬಿ.ಸಿ.ಶೈಲಾ ನಾಗರಾಜ್ ಅವರಿಗೆ ಇಂದಿರಾರತ್ನ ದತ್ತಿ ಪ್ರಶಸ್ತಿ ಪ್ರದಾನಮಾಡಿ ಮಾತನಾಡಿದರು. ಯುವಜನರು, ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಮೂಡಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿದೆ ಎಂದರು.

ದೊಡ್ಡದೊಡ್ಡ ಸಾಹಿತಿಗಳು, ವಿಮರ್ಶಕರಿಗೆ ಜನಸಾಮಾನ್ಯರು ಲೆಕ್ಕಕ್ಕೇಇಲ್ಲ. ಸಾಮಾನ್ಯರ ಅಭಿರುಚಿ ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಶ್ರೇಷ್ಠತೆಯ ವ್ಯಸನದಿಂದ ನರಳುತ್ತಿದ್ದು, ಮಹಿಳಾ ಸಾಹಿತ್ಯವನ್ನು ಅವಗಣನೆಯಿಂದ ನೋಡುತ್ತಿದ್ದಾರೆ ಎಂದು ವಿಷಾದಿಸಿದರು.

ADVERTISEMENT

ಕನಕ, ಬಸವ, ಅಂಬೇಡ್ಕರ್, ವಾಲ್ಮೀಕಿ ಜಯಂತಿಗಳನ್ನು ಸರ್ಕಾರಗಳು ಮಾಡುತ್ತವೆ. ಆಯಾ ಜಾತಿಯ ಮುಖಂಡರು, ಶಾಸಕರನ್ನು ಕರೆಸಿ ಪ್ರಶಸ್ತಿ ಕೊಡಿಸಿ ಕಾರ್ಯಕ್ರಮ ಮುಗಿಸುವುದರಿಂದ ಯಾರಿಗೂ ಮಹನೀಯರ ಕುರಿತು ಮಾಹಿತಿ ತಿಳಿಯುವುದಿಲ್ಲ. ಕಣ್ಣಿಗೆ ಪಟ್ಟಿಕಟ್ಟಿಕೊಂಡಂತೆ ಕಾರ್ಯಕ್ರಮ ನಡೆಸುತ್ತಾರೆ. ಅವರನ್ನು ಜಾತಿಗೆ ಸೀಮಿತಗೊಳಿಸಿ ಅರ್ಥಹೀನವಾಗಿ ಜಯಂತಿ ಆಚರಿಸುತ್ತಿದ್ದು, ಇದು ತಪ್ಪಬೇಕು. ಅವರು ಸಮಾಜದ ಎಲ್ಲಾ ವರ್ಗಕ್ಕೆ ಸೇರಿದವರು. ಅವರನ್ನು ಪ್ರತಿಯೊಬ್ಬರೂ ಗೌರವಿಸಬೇಕು ಎಂದರು.

ಲೇಖಕಿಯರ ಸಂಘದವರು ಶಾಲೆಗಳಿಗೆ ಹೋಗಿ ಕನಕ, ವಾಲ್ಮೀಕಿ, ಅಂಬೇಡ್ಕರ್ ಕುರಿತು ಪ್ರಬಂಧ ಸ್ಪರ್ಧೆ, ಹಾಡುವ ಸ್ಪರ್ಧೆ ನಡೆಸಿ ವಿದ್ಯಾರ್ಥಿಗಳನ್ನು ಕನ್ನಡದ ಕಡೆ ಸೆಳೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ರಾಜ್ಯೋತ್ಸವ ಒಂದು ವಾರ್ಷಿಕ ಆಚರಣೆಯಾಗಿ ಕಾಣುತ್ತಿದೆ. ಕನ್ನಡ ವಾತಾವರಣ ಇಲ್ಲವಾಗಿದೆ. ಅದನ್ನು ಹೇಗೆ ಒಡಮೂಡಿಸಬೇಕು ಎಂಬ ಬಗ್ಗೆ ಚಿಂತಿಸಬೇಕು. ಕನ್ನಡ ಭಾಷೆ, ಸಂಸ್ಕೃತಿ ಬಗ್ಗೆ ಯುವಜನರು, ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಅರಿವುಮೂಡಿಸುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪತ್ ಕುಮಾರ್, ಇಂದಿರಾರತ್ನ ದತ್ತಿ ನಿಧಿ ಇಟ್ಟಿರುವ ರಾಜನ್ ಅವರನ್ನು ಸ್ಮರಿಸಿದರು. ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಲ್ಲಿಕಾ ಬಸವರಾಜು, ರಾಣಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.