
ತುಮಕೂರು: ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಹಾಗೂ ಇತರೆಡೆಗಳಲ್ಲಿ ಜ. 16ರಿಂದ 22ರ ವರೆಗೆ ಕರ್ನಾಟಕ ಕ್ರೀಡಾಕೂಟ (ಒಲಿಂಪಿಕ್ಸ್) ನಡೆಯಲಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ, ಜಿಲ್ಲಾ ಆಡಳಿತದ ವತಿಯಿಂದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಕ್ರೀಡಾಂಗಣದಲ್ಲಿ ಜ. 16ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಜ. 22ರಂದು ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಥಾವರಚಂದ್ ಗೆಹಲೋತ್ ಭಾಗವಹಿಸಲಿದ್ದಾರೆ.
ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಜ. 16ರಿಂದ 22ರ ವರೆಗೆ ಸ್ಪರ್ಧೆಗಳು ನಡೆಯಲಿವೆ. ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ ಬಾಲ್, ಬಾಕ್ಸಿಂಗ್, ಕೆನೋಯಿಂಗ್ ಮತ್ತು ಕಯಾಕಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್‍ಬಾಲ್, ಜಿಮ್ನಾಸ್ಟಿಕ್, ಹ್ಯಾಂಡ್‍ಬಾಲ್, ಜೂಡೋ, ಕಬ್ಬಡ್ಡಿ, ಕೊಕ್ಕೊ, ಲಾನ್ ಟೆನ್ನಿಸ್, ನೆಟ್‍ಬಾಲ್, ಟೇಬಲ್ ಟೆನ್ನಿಸ್, ಟೇಕ್ವಾಂಡೊ, ವಾಲಿಬಾಲ್, ವೇಯ್ಟ್‌ಲಿಫ್ಟಿಂಗ್, ರಸ್ಲಿಂಗ್ ಕ್ರೀಡೆಗಳು ನಡೆಯಲಿವೆ.
2030ರ ಕಾಮೆನ್ ವೆಲ್ತ್ ಕ್ರೀಡಾಕೂಟ ಭಾರತದಲ್ಲಿ ನಡೆಯಲಿದ್ದು, 2036ರ ಒಲಿಂಪಿಕ್ ಕ್ರೀಡಾಕೂಟಕ್ಕೂ ಭಾರತ ಆತಿಥ್ಯ ವಹಿಸುವ ಸಾಧ್ಯತೆ ಇದೆ. ಹಾಗಾಗಿ ಜಿಲ್ಲೆಯ ಯುವ ಸಮುದಾಯವನ್ನು ಪ್ರೋತ್ಸಾಹಿಸುವ ಅಗತ್ಯವಿದೆ. ಇದಕ್ಕೆ ಪೂರಕವಾಗಿ ನಗರದಲ್ಲಿ ನಡೆಯಲಿರುವ ಕರ್ನಾಟಕ ಕ್ರೀಡಾಕೂಟ ಸ್ಫೂರ್ತಿಯಾಗಲಿದೆ ಎಂದು ಸಚಿವ ಜಿ.ಪರಮೇಶ್ವರ ಆಶಯ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗೆ ಪರಮೇಶ್ವರ ಪತ್ರ
ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪತ್ರ ಬರೆದಿದ್ದಾರೆ. ತುಮಕೂರು ಇತಿಹಾಸದಲ್ಲೇ ಮೊದಲ ಬಾರಿಗೆ ನಗರದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಜಿಲ್ಲೆಯ ಯುವ ಜನರಿಗೆ ಇದು ಸ್ಫೂರ್ತಿಯಾಗಲಿದೆ ಎಂದು ಪತ್ರದಲ್ಲಿ ನಮೂದಿಸಿದ್ದಾರೆ. ಕ್ರೀಡಾಕೂಟದಲ್ಲಿ ವಿವಿಧ 27 ಸ್ಪರ್ಧೆಗಳು ನಡೆಯುತ್ತಿದ್ದು ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ ಸುಮಾರು 9 ಸಾವಿರ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.
ಕರ್ನಾಟಕ ಒಲಿಂಪಿಕ್ ಸಂಸ್ಥೆ ಪ್ರತಿ ವರ್ಷ ಒಂದೊಂದು ಜಿಲ್ಲೆಯಲ್ಲಿ ಕರ್ನಾಟಕ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿದ್ದು ಪ್ರಸಕ್ತ ಸಾಲಿನ ಕ್ರೀಡಾಕೂಟದ ಆತಿಥ್ಯ ವಹಿಸುವ ಅವಕಾಶವನ್ನು ಜಿಲ್ಲೆಗೆ ನೀಡಿರುವುದು ನಮ್ಮೆಲ್ಲ ಕ್ರೀಡಾಸಕ್ತರಿಗೆ ಹಾಗೂ ನಾಗರಿಕರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದ್ದಾರೆ. ಕೃಷಿ ತೋಟಗಾರಿಕೆ ಕೈಗಾರಿಕೆ ಶಿಕ್ಷಣ ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸದಾ ಕ್ರಿಯಾಶೀಲವಾಗಿರುವ ಜಿಲ್ಲೆ ಕ್ರೀಡೆಯಲ್ಲೂ ಹಿಂದೆಬಿದ್ದಿಲ್ಲ. ಜಿಲ್ಲೆಯ ಅನೇಕ ಕ್ರೀಡಾಪಟುಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿ ಜಿಲ್ಲೆಗೆ ಕೀರ್ತಿ ತಂದಿರುವುದು ಹೊಸತೇನಲ್ಲ. ಅಂತೆಯೇ ಮುಂದಿನ ಪೀಳಿಗೆಗೆ ಕ್ರೀಡಾಸಕ್ತಿಯನ್ನು ಬೆಳೆಸುವುದು ಕ್ರೀಡೆಗೆ ಹೆಚ್ಚಿನ ಅವಕಾಶ ಸಿಗುವಂತೆ ಮಾಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.