
ಮಧುಗಿರಿ (ತುಮಕೂರು): ‘2004ರಲ್ಲಿ ನಾನು ಜೆಡಿಎಸ್‌ನಿಂದ ಶಾಸಕನಾಗಿದ್ದಾಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ನೆಲಕಚ್ಚಿತ್ತು. ಮತ್ತೆ ಅಂತಹ ಸಂದರ್ಭ ಬಂದರೂ ಬರಬಹುದು’ ಎಂದು ಕಾಂಗ್ರೆಸ್ ಶಾಸಕ ಕೆ.ಎನ್.ರಾಜಣ್ಣ ಸೂಚ್ಯವಾಗಿ ಹೇಳಿದ್ದಾರೆ.
ತಾಲ್ಲೂಕಿನ ದೊಡ್ಡೇರಿಯಲ್ಲಿ ಬುಧವಾರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ‘ಮುಂದೆ ನಾನು ಯಾವ ಬಾವುಟ ಹಿಡಿಯಬೇಕು ಎಂಬುದನ್ನು ಕಾಯ್ದು ನೋಡೋಣ’ ಎಂದರು.
‘ಕಾಂಗ್ರೆಸ್ ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳು ಇಂದು ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯಲ್ಲಿ ಯಾರೂ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದಿರಲಿಲ್ಲ. ಅದು ಏಕೆ ಎಂದು ನನಗೂ ಗೊತ್ತಿಲ್ಲ. ಮುಂದೆ ನಾನು ಕೂಡ ಯಾವ ಬಾವುಟ ಹಿಡಿಯುತ್ತೇನೊ ಗೊತ್ತಿಲ್ಲ’ ಎಂದರು.
‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಜನರ ಬೆಂಬಲವೇ ನನಗೆ ಆನೆ ಬಲ. ಜನರನ್ನು ನಂಬಿ ನಾನು ರಾಜಕಾರಣ ಮಾಡುತ್ತಿದ್ದೇನೆ’ ಎಂದು ರಾಜಣ್ಣ ಹೇಳಿದರು.
‘ನನಗೂ ಮಧುಗಿರಿಗೂ ಯಾವ ಋಣಾನುಬಂಧವೊ ಗೊತ್ತಿಲ್ಲ. ತುಮಕೂರಿನಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಬೇಕು ಎಂದುಕೊಂಡಿದ್ದ ನನಗೆ ಮಧುಗಿರಿ ಕ್ಷೇತ್ರದ ಜನ ರಾಜಕೀಯ ಜನ್ಮನೀಡಿದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.