
ಕೊರಟಗೆರೆ: ‘ಬನ್ನಿ ಸಾರ್ ಬನ್ನಿ…, ಬನ್ನಿ ಅಕ್ಕ…, ಬನ್ನಿ ಅಣ್ಣ… ಮನೆಯಿಂದ ಮಾಡಿದ ತಾಜಾ ತಿನಿಸು… ಕೆಮಿಕಲ್ ಹಾಕಿಲ್ಲ, ಸಹಜ ರುಚಿ, ನೈಜ ಬಣ್ಣ… ನಿಮ್ಮ ಹೊಟ್ಟೆ ತುಂಬಿಸುವ ಜತೆಗೆ ನಮ್ಮ ಜೇಬು ಕೂಡ ತುಂಬಿಸಿ…’ ಎಂದು ಪುಟಾಣಿಗಳ ನಗುಮುಖದ ಆಹ್ವಾನ, ಖರೀದಿಗೆ ಪ್ರೇರೇಪಿಸುವ ಮಾತುಗಳು—ಇವೆಲ್ಲವೂ ಸೇರಿ ವಡ್ಡಗೆರೆ ಸರ್ಕಾರಿ ಪ್ರೌಢಶಾಲೆ ಆವರಣವನ್ನೇ ಶನಿವಾರ ಒಂದು ಸಾಂಪ್ರದಾಯಿಕ ಗ್ರಾಮೀಣ ಸಂತೆಯಾಗಿ ಪರಿವರ್ತಿಸಿದ್ದವು.
ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣಗೊಳಿಸುವುದು, ಅವರಲ್ಲಿ ಜೀವನೋಪಯೋಗಿ ಕೌಶಲ ಬೆಳೆಸುವ ಉದ್ದೇಶದಿಂದ ಶಿಕ್ಷಣ ಇಲಾಖೆ ಪ್ರೌಢಶಾಲೆಯಲ್ಲಿ ಮಕ್ಕಳ ಕೌಶಲಾಭಿವೃದ್ಧಿ ಮೇಳ ಆಯೋಜಿಸಿತ್ತು. ಈ ಮೇಳದಲ್ಲಿ ಮಕ್ಕಳೇ ವ್ಯಾಪಾರಿಗಳು, ಮಕ್ಕಳೇ ಗ್ರಾಹಕರನ್ನು ಆಕರ್ಷಿಸುವ ಮಾರಾಟಗಾರರಾಗಿದ್ದರು.
ಮೇಳದಲ್ಲಿ ಮಕ್ಕಳು ತಮ್ಮ ಮನೆಯಲ್ಲಿ ತಯಾರಿಸಿದ್ದ ಜಾಡಿ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಬೋಂಡಾ, ಪಾನಿಪೂರಿ, ಫ್ರೂಟ್ ಸಲಾಡ್, ಬಗೆಬಗೆಯ ಹಣ್ಣು, ತಾಜಾ ತರಕಾರಿ, ಹೂವು, ತೆಂಗಿನಕಾಯಿ, ಪೂಜಾ ಸಾಮಗ್ರಿ ಹೀಗೆ ಅನೇಕ ವಸ್ತುಗಳು ಸಂತೆಯಲ್ಲಿ ಮೇಳೈಸಿದ್ದವು.
ಮಕ್ಕಳು ತಮ್ಮ ವಸ್ತುಗಳ ಬೆಲೆ ನಿಗದಿ ಮಾಡಿ, ಗ್ರಾಹಕರೊಂದಿಗೆ ಮಾತುಕತೆ ನಡೆಸಿ, ಮಾರಾಟದಲ್ಲಿ ನಿರತರಾಗಿದ್ದರು. ‘ಒಂದು ಕೊಂಡ್ರೆ ಇನ್ನೊಂದು ಉಚಿತ’, ‘ಇವತ್ತಿನ ಸ್ಪೆಷಲ್’, ‘ತಾಜಾ ತಿನಿಸು’ ಎಂಬಂತಹ ಮಾರಾಟದ ಶೈಲಿಗಳು ಪೋಷಕರು ಹಾಗೂ ಶಿಕ್ಷಕರನ್ನು ಅಚ್ಚರಿಗೊಳಿಸಿತು.
ಹಳ್ಳಿಗಾಡಿನ ಮಕ್ಕಳು ತಮ್ಮ ಊರ ಸುತ್ತಮುತ್ತ ನಡೆಯುವ ಜಾತ್ರೆ, ಸಂತೆ, ಹಬ್ಬಗಳನ್ನು ಗಮನಿಸಿ ಕಲಿಯುತ್ತಾರೆ ಎಂಬುದಕ್ಕೆ ಈ ಮೇಳ ಸಾಕ್ಷಿಯಾಗಿತ್ತು.
ಮೇಳ ವೀಕ್ಷಿಸಿದ ಪೋಷಕರು, ಪಠ್ಯ ಪುಸ್ತಕದ ಪಾಠಕ್ಕಿಂತಲೂ ಇಂತಹ ಅನುಭವಾಧಾರಿತ ಕಲಿಕೆ ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ ಮತ್ತು ಸ್ವಾವಲಂಬನೆ ಬೆಳೆಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರು ಕೂಡ ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆ, ವ್ಯಾಪಾರ ಮತ್ತು ತಂಡ ಕಾರ್ಯದ ಮನೋಭಾವ ಕಂಡು ಸಂತಸಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.