ADVERTISEMENT

ಕೊರಟಗೆರೆ: ಸರಕು ಸಾಗಣೆ ವಾಹನದಲ್ಲಿ ಕ್ರೀಡಾಕೂಟಕ್ಕೆ ಹೊರಟ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 5:17 IST
Last Updated 2 ಆಗಸ್ಟ್ 2025, 5:17 IST
ಕೊರಟಗೆರೆ-ತುಮಕೂರು ಹೆದ್ದಾರಿಯಲ್ಲಿ ಕೆಸ್ತೂರು ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಸರಕು ಸಾಗಣೆ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು
ಕೊರಟಗೆರೆ-ತುಮಕೂರು ಹೆದ್ದಾರಿಯಲ್ಲಿ ಕೆಸ್ತೂರು ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಸರಕು ಸಾಗಣೆ ವಾಹನದಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯಲಾಯಿತು   

ಕೊರಟಗೆರೆ: ಕೊರಟಗೆರೆ-ತುಮಕೂರು ಹೆದ್ದಾರಿಯಲ್ಲಿ ತಾಲ್ಲೂಕಿನ ತೋವಿನಕೆರೆ ಸಮೀಪದ ಕೆಸ್ತೂರು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಕ್ರೀಡಾಕೂಟಕ್ಕೆ ಕರೆದೊಯ್ಯುವಾಗ ಕುರಿಗಳಂತೆ ಮಕ್ಕಳನ್ನು ತುಂಬಿಕೊಂಡು ಹೋಗಿದ್ದು, ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿದೆ.

ಹೆದ್ದಾರಿಯ ಲಿಂಗಾಪುರ ಬಳಿಯ ಅಕ್ಷಯ ಕಾಲೇಜಿನ ಆವರಣದಲ್ಲಿ ಕ್ರೀಡಾಕೂಟಕ್ಕಾಗಿ ವಿದ್ಯಾರ್ಥಿಗಳನ್ನು ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಹೋಗಲಾಯಿತು. ವಿದ್ಯಾರ್ಥಿಗಳನ್ನು ಸರಕು ಸಾಗಣೆ ವಾಹನಗಳಲ್ಲಿ ಸಾಗಿಸುವುದು ನಿಷೇಧ. ಸಣ್ಣ ವಾಹನದಲ್ಲಿ ಪ್ರೌಢಶಾಲೆಯ 40ಕ್ಕೂ ಹೆಚ್ಚು ಬಾಲಕಿಯರು, ಬಾಲಕರನ್ನು ಗೂಡ್ಸ್ ವಾಹನದೊಳಗೆ ಕಿಕ್ಕಿರಿದು ತುಂಬಲಾಗಿತ್ತು. ಮಕ್ಕಳು ಗೂಡ್ಸ್ ವಾಹನದಲ್ಲಿ ಸಂಚರಿಸುತ್ತಿದ್ದ ದೃಶ್ಯವೇ ಆತಂಕಕಾರಿಯಾಗಿತ್ತು. ವಾಹನದಲ್ಲಿ ತುರ್ತು ಬ್ರೇಕ್ ಹಾಕಿದರೂ ಅಥವಾ ಒಂದು ತಪ್ಪಾದ ತಿರುವಿನಲ್ಲಿ ವಾಹನ ಬಿದ್ದರೂ ಅಪಾಯಕ್ಕೆ ಆಹ್ವಾನ ನೀಡುವಂತಿತ್ತು.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ವಿಶ್ವಾಸದಿಂದ ಕಳುಹಿಸುತ್ತಾರೆ. ಆದರೆ ಶಾಲೆಯೇ ಜೀವದ ಅಪಾಯಕ್ಕೆ ತಳ್ಳಿದರೆ ಯಾರನ್ನು ನಂಬಬೇಕು? ಇಂತಹ ನಿರ್ಲಕ್ಷ್ಯಕ್ಕೆ ಕಾರಣರಾದವರ ಮೇಲೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ADVERTISEMENT

ಶಾಲಾ ಬಸ್ ಅಥವಾ ಅನುಮೋದಿತ ಮಿನಿ ಬಸ್ ಬಳಕೆ, ಸೀಟುಗಳಿಗೆ ಅನುಗುಣವಾಗಿ ಮಾತ್ರ ವಿದ್ಯಾರ್ಥಿಗಳ ಹಾಜರಾತಿ, ವಾಹನದಲ್ಲಿ ಸುರಕ್ಷತಾ ಬಾಗಿಲು, ಸೀಟ್‌ ಬೆಲ್ಟ್, ತುರ್ತು ಚಿಕಿತ್ಸಾ ಪೆಟ್ಟಿಗೆ, ಸಿಬ್ಬಂದಿಯ ಮೇಲ್ವಿಚಾರಣೆ ಮತ್ತು ವೇಗ ಮಿತಿಯ ಪಾಲನೆ ಮಕ್ಕಳ ಸಾರಿಗೆಗೆ ಕಡ್ಡಾಯವಾಗಿರುವ ನಿಯಮಗಳಾಗಿವೆ. ಆದರೆ ಈ ನಿಯಮಗಳಲ್ಲಿ ಒಂದನ್ನೂ ಪಾಲಿಸದಿರುವುದು ಅಧಿಕಾರಿಗಳ ಕಾರ್ಯವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.