ADVERTISEMENT

ಕೊರಟಗೆರೆ: ಜೆಡಿಎಸ್‌ಗೆ ಒಲಿದ ಗದ್ದುಗೆ

ಫಲಿಸದ ‘ಕೈ’ ಕಸರತ್ತು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 3:28 IST
Last Updated 6 ನವೆಂಬರ್ 2020, 3:28 IST
ಕೊರಟಗೆರೆ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು
ಕೊರಟಗೆರೆ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು   

ಕೊರಟಗೆರೆ: ಇಲ್ಲಿನ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಮಂಜುಳ ಸತ್ಯನಾರಾಯಣ, ಉಪಾಧ್ಯಕ್ಷರಾಗಿ ಭಾರತಿ ಸಿದ್ದಮಲ್ಲಯ್ಯ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 15 ಸದಸ್ಯ ಬಲದ ಪಟ್ಟಣ ಪಂಚಾಯಿತಿಯಲ್ಲಿ 8 ಜೆಡಿಎಸ್, 5 ಕಾಂಗ್ರೆಸ್, 1 ಬಿಜೆಪಿ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ನಾಲ್ಕನೇ ವಾರ್ಡ್‌ ಕಾಂಗ್ರೆಸ್ ಸದಸ್ಯರ ನಿಧನದಿಂದಾಗಿ 14 ಸದಸ್ಯರಿದ್ದಾರೆ. ‌

ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಬಹುಮತ ಹೊಂದಿದ್ದ ಜೆಡಿಎಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮೂವರು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೆ ಮಂಜುಳಾ ಅವರನ್ನು ಅಧ್ಯಕ್ಷ ಸ್ಥಾನಕ್ಕೆ, ಭಾರತಿ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ADVERTISEMENT

ಕಾಂಗ್ರೆಸ್‌ ಕಸರತ್ತು: ಕೊನೆ ಹಂತದಲ್ಲಿ ಜೆಡಿಎಸ್‌ನ ಒಬ್ಬ ಆಕಾಂಕ್ಷಿಯನ್ನು ತನ್ನತ್ತ ಸೆಳೆದ ಕಾಂಗ್ರೆಸ್ ಗಾದಿಗಾಗಿ ತೀವ್ರ ಪೈಪೋಟಿ ನಡೆಸಿದರೂ ಕೈಗೂಡಲಿಲ್ಲ. ಕಳೆದ ಸಾಲಿನಲ್ಲಿ ಕಾಂಗ್ರೆಸ್ ಬಹುಮತ ಇಲ್ಲದಿದ್ದರೂ ಜೆಡಿಎಸ್ ಸದಸ್ಯರೊಬ್ಬರನ್ನು ಪಕ್ಷಕ್ಕೆ ಸೆಳೆದು ಅಧ್ಯಕ್ಷ ಸ್ಥಾನ ನೀಡುವ ಮೂಲಕ ಪಟ್ಟಣ ಪಂಚಾಯಿತಿ ಗದ್ದುಗೆ ಏರಿತ್ತು. ಅದೇ ರೀತಿ ಈ ವರ್ಷವೂ ಬಿಜೆಪಿ ಹಾಗೂ ಪಕ್ಷೇತರ ಸದಸ್ಯರನ್ನು ಸೆಳೆದು ಅದರೊಂದಿಗೆ ಒಬ್ಬ ಜೆಡಿಎಸ್ ಆಕಾಂಕ್ಷಿಯನ್ನೆ ಅಧ್ಯಕ್ಷ ಹುದ್ದೆಗೆ ಕೂರಿಸಲು ಶ್ರಮಿಸಿದರೂ ಕೊನೆಗಳಿಗೆಯಲ್ಲಿ ಅದು ಕೈಗೂಡಲಿಲ್ಲ.

ಪುರಸಭೆ ಅಧಿಕಾರ ಪಡೆಯುವಲ್ಲಿ ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ ಅವರಿಗೆ ಹಿನ್ನಡೆಯಾದಂತಾಗಿದೆ. ಜೆಡಿಎಸ್ ತನ್ನ ಸದಸ್ಯರು ಬೇರೆಡೆ ಹೋಗದಂತೆ ಎಚ್ಚರಿಕೆ ವಹಿಸಿದ್ದರಿಂದ ಅಧಿಕಾರ ಜೆಡಿಎಸ್ ತೆಕ್ಕೆಗೆ ಲಭಿಸಿದೆ.

ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಆರ್.ಶಿವರಾಮಯ್ಯ, ಜೆಡಿಎಸ್ ಜಿಲ್ಲಾ ಕಾರ್ಯಧ್ಯಕ್ಷ ಎಚ್.ಕೆ.ಮಹಾಲಿಂಗಪ್ಪ, ತಾಲ್ಲೂಕು ಕಾರ್ಯಧ್ಯಕ್ಷ ಜೆ.ಎನ್.ನರಸಿಂಹರಾಜು, ಕಾರ್ಯದರ್ಶಿ ಲಕ್ಷ್ಮಣ್, ನಗರ ಘಟಕದ ಅಧ್ಯಕ್ಷ ನಾಗೇಂದ್ರ, ಮುಖಂಡರಾದ, ವಿ.ಕೆ ವೀರಕ್ಯಾತರಾಯ, ಆನಂದ್, ನಂಜಪ್ಪ, ತುಂಬಾಡಿ ಲಕ್ಷ್ಮೀಶ, ಕಾಮರಾಜು, ಪ.ಪಂ.ಸದಸ್ಯರಾದ ಪುಟ್ಟನರಸಯ್ಯ, ಲಕ್ಷ್ಮೀನಾರಾಯಣ್, ಪ್ರದೀಪ್ ಕುಮಾರ್, ನಟರಾಜು, ಕಾವ್ಯಶ್ರೀ, ಹುಸ್ನಾಫರೀಯಾ, ಅನಿತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.