ADVERTISEMENT

569 ಕಿ.ಮೀ ಸಾಗಿಬಂದ ‘ಕೃಷ್ಣೆ’

ನಿಡಗಲ್ ಗಡಿಗೆ ಹರಿದ ನೀರು: ಕುಂಟುತಲ್ಲೇ ಇದೆ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:56 IST
Last Updated 12 ಡಿಸೆಂಬರ್ 2025, 5:56 IST
ಪಾವಗಡ ತಾಲ್ಲೂಕು ಮದ್ದೆ ಬಳಿ ಆಂಧ್ರಪ್ರದೇಶ ನಿರ್ಮಿಸಿರುವ ಕಾಲುವೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರು
ಪಾವಗಡ ತಾಲ್ಲೂಕು ಮದ್ದೆ ಬಳಿ ಆಂಧ್ರಪ್ರದೇಶ ನಿರ್ಮಿಸಿರುವ ಕಾಲುವೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರು   

ಪಾವಗಡ: ಉರಿ ಬಿಸಿಲು, ಬರ, ಅನಾವೃಷ್ಟಿ, ಬೆಳೆ ಹಾನಿಯಿಂದ ತತ್ತರಿಸಿದ್ದ ತಾಲ್ಲೂಕಿನ ನಿಡಗಲ್‌ ಹೋಬಳಿ ಜನರಿಗೆ ಆಂಧ್ರದ ಹಂದ್ರಿನಿವಾ ಸುಜಲಶ್ರವಂತಿ ಯೋಜನೆ ನೆಮ್ಮದಿಯ ಬದುಕಿನ ಭರವಸೆ ನೀಡಿದೆ.

ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳು ದಶಕಗಳಿಂದ ಪ್ರಗತಿಯಲ್ಲಿಯೇ ಇವೆ. ಇಷ್ಟೆಲ್ಲದರ ನಡುವೆ ಆಂಧ್ರದ ಶ್ರೀಶೈಲಂ ಜಲಾಶಯದಿಂದ 500ರಿಂದ 600 ಕಿ.ಮೀ ದೂರದವರೆಗೆ ಕೃಷ್ಣಾ ನದಿ ನೀರು ಹರಿಸುವ ಹಂದ್ರಿನಿವಾ ಸುಜಲಶ್ರವಂತಿ ನೀರು ತಾಲ್ಲೂಕಿನ ಕೂಗಳತೆ ದೂರದಲ್ಲಿ ಹರಿಯುತ್ತಿರುವುದು ಗಡಿಗೆ ಹೊಂದಿಕೊಂಡಿರುವ ರೈತರಲ್ಲಿ ಸಂತಸ ಮೂಡಿಸಿದೆ.

ಈ ನೀರಿನಿಂದ ವಂಚಿತರಾದ ತಾಲ್ಲೂಕಿನ ಇತರೆ ರೈತರಲ್ಲಿ ಸರ್ಕಾರಗಳ ಬಗ್ಗೆ ಬೇಸರ ಮೂಡಿಸುತ್ತಿದೆ. ಕಾಲುವೆಯಲ್ಲಿ ಹರಿಯುತ್ತಿರುವ ನೀರನ್ನು ಕಣ್ತುಂಬಿಕೊಳ್ಳಲು ತಾಲ್ಲೂಕಿನ ರೈತರು ಎಡತಾಕುತ್ತಿದ್ದಾರೆ. ಕಾಲುವೆಗೆ ಇಳಿದು ನೀರು ಧುಮುಕುವ ಸ್ಥಳದಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಅಲ್ಪ ತೃಪ್ತರಾಗುತ್ತಿದ್ದಾರೆ. ನಮ್ಮ ಕೆರೆಗಳಿಗೆ ಯಾವಾಗ ಹೀಗೆ ನೀರು ಹರಿಯುತ್ತದೆಯೋ ಎಂದು ಗೊಣಗಿಕೊಂಡು ಗ್ರಾಮಗಳಿಗೆ ಮರಳುತ್ತಿರುವುದು ಸಾಮಾನ್ಯವಾಗಿದೆ.

ADVERTISEMENT

ಆಂಧ್ರ ಪ್ರದೇಶದಲ್ಲಿ ಸರ್ಕಾರಗಳು ಬದಲಾದರೂ ರೈತರಿಗೆ ನೀರು ಹರಿಸಲೇಬೇಕೆಂಬ ಧ್ಯೇಯೋದ್ದೇಶ ಬದಲಾಗಿಲ್ಲ. ಟಿಡಿಪಿ, ವೈಎಸ್ಆರ್‌ಸಿಪಿ ಸೇರಿದಂತೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಯೋಜನೆಯ ವೇಗ ಕಡಿಮೆಯಾಗಿಲ್ಲ. ಶ್ರೀಶೈಲಂ ಜಲಾಶಯದಿಂದ ಆಂಧ್ರ ಪ್ರದೇಶದ ಆರು ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವುದರ ಜೊತೆಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಗುರಿಯಾಗಿತ್ತು. 2005ರಲ್ಲಿ ಪ್ರಾರಂಭವಾದ ಯೋಜನೆ ಮೂರು ಹಂತಗಳಲ್ಲಿ 569 ಕಿ.ಮೀ. ದೂರದ ರಾಜ್ಯದ ಹಲ ಜಿಲ್ಲೆಗಳಿಗೆ ಸಂಗ್ರಹಾಗಾರಗಳನ್ನು ನಿರ್ಮಿಸಿಕೊಂಡು ಹಂತ ಹಂತವಾಗಿ ನೀರು ಪೂರೈಕೆ ಮಾಡಿಕೊಂಡು ಬರುತ್ತಿದೆ. 

ಇದೀಗ ಆಂಧ್ರದ ಮಡಕಶಿರಾ ತಾಲ್ಲೂಕಿನ ಮೂಲಕ ನಿಡಗಲ್‌ ಹೋಬಳಿಗೆ ಹೊಂದಿಕೊಂಡಿರುವ ಅಲಕೂರು ಕೆರೆಗೆ ಕಾಲುವೆ ಮೂಲಕ ನೀರು ಹರಿಯುತ್ತಿದೆ. ಅಲಕೂರು ಕೆರೆಯಿಂದ ಅಮರಾಪುರ ಕೆರೆಗೆ ನೀರು ಹರಿಯಲಿದೆ. ಇದರಿಂದ ತಾಲ್ಲೂಕಿನ ಕೊತ್ತೂರು, ಮದ್ದೆ, ಕಿಲಾರ್ಲಹಳ್ಳಿ, ಕರೇಕ್ಯಾತನಹಳ್ಳಿ, ತುಮಕುಂಟೆ, ಕಳಾರಾಜನಹಳ್ಳಿ, ಅರಸೀಕೆರೆ, ಕದಿರೇಹಳ್ಳಿ, ಕೋಡಿಗೇಹಳ್ಳಿಗಳ ಗಡಿ ಜಮೀನುಗಳಿಗೆ ಅನುಕೂಲವಾಗಲಿದೆ.

ಅಲಕೂರು, ಅಮರಾಪುರ ಕೆರೆ ತುಂಬುವುದರಿಂದ ಈ ಭಾಗದ ಅಂತರ್ಜಲ ಹೆಚ್ಚಿ ಕೊಳವೆ ಬಾವಿಗಳು, ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಲಿದೆ ಎಂಬ ನೀರೀಕ್ಷೆಯಲ್ಲಿ ತಾಲ್ಲೂಕಿನ ರೈತರಿದ್ದಾರೆ. ಅರಸೀಕೆರೆ, ಮಂಗಳವಾಡ, ಸಿ ಕೆ ಪುರ, ನ್ಯಾಯದಗುಂಟೆ ಗ್ರಾಮ ಪಂಚಾಯಿತಿಗಳ ಗ್ರಾಮಗಳಿಗೆ ಇದರಿಂದ ಅನುಕೂಲವಾಗಲಿದೆ.

ಕೇವಲ 1 ರಿಂದ 2 ಕಿ ಮೀ ದೂರದಲ್ಲಿ ನೀರು ಹರಿಯುವುದು ಒಂದೆಡೆ ರೈತರಲ್ಲಿ ಸಂತಸ ತರಿಸಿದರೆ, ಮತ್ತೊಂದೆಡೆ ವರ್ಷಗಳು ಕಳೆದರೂ ರಾಜ್ಯದ ಯೋಜನೆಗಳು ಆಮೆಗತಿಯಲ್ಲಿ ಸಾಗುತ್ತಿವೆ. ಹನಿ ನೀರು ಸಹ ತಾಲ್ಲೂಕಿನ ಕೆರೆಗಳಿಗೆ ಹರಿಯುತ್ತಿಲ್ಲವಲ್ಲಾ ಎಂಬ ಬೇಸರ ಸಾರ್ವಜನಿಕರಲ್ಲಿ ಕಾಡುತ್ತಿದೆ.

ನಮ್ಮ ಜನಪ್ರತಿನಿಧಿಗಳು ಇನ್ನಾದರೂ ಗುದ್ದಾಟ, ಕೆಸರೆರೆಚಾಟ ನಿಲ್ಲಿಸಿ ಇಂತಹ ಜನಪರ, ರೈತಪರ ಯೋಜನೆಗಳ ಅನುಷ್ಠಾನಕ್ಕೆ ಪಕ್ಷಬೇಧ ಮರೆತು ಕಟಿಬದ್ಧರಾಗಬೇಕು ಎಂಬ ಮಾನೋಕಾಮನೆಯನ್ನು ತಾಲ್ಲೂಕಿನ ಜನತೆ ವ್ಯಕ್ತಪಡಿಸುತ್ತಿದ್ದಾರೆ.

ಪಾವಗಡ ತಾಲ್ಲೂಕು ಮದ್ದೆ ಬಳಿ ಆಂಧ್ರಪ್ರದೇಶ ನಿರ್ಮಿಸಿರುವ ಕಾಲುವೆಯಲ್ಲಿ ಹರಿಯುತ್ತಿರುವ ಕೃಷ್ಣಾ ನದಿ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.