ತುಮಕೂರು: ‘ಭ್ರಷ್ಟಾಚಾರದಿಂದ ಲಪಟಾಯಿಸಿದ ಹಣವನ್ನು ಚುನಾವಣೆ ವೇಳೆ ಜನರಿಗೆ ಹಂಚಿ ಮತ ಖರೀದಿಸುವ ಭ್ರಷ್ಟರು ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದಾರೆ’ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆಆರ್‌ಎಸ್) ರಾಜ್ಯ ಕಾರ್ಯದರ್ಶಿ ಜ್ಞಾನ ಸಿಂಧು ಸ್ವಾಮಿ ಟೀಕಿಸಿದರು.
ನಗರದಲ್ಲಿ ಶನಿವಾರ ತುಮಕೂರು ಲೋಕಸಭಾ ಕ್ಷೇತ್ರದ ಕೆಆರ್‌ಎಸ್ ಅಭ್ಯರ್ಥಿ ಪ್ರದೀಪ್‌ಕುಮಾರ್ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದರು.
ಕೆಆರ್‌ಎಸ್ ಯಾವುದೇ ಹಣ ಖರ್ಚು ಮಾಡದೆ ನೈಜ ಅಭಿವೃದ್ಧಿ ಮುಂದಿಟ್ಟುಕೊಂಡು ಮತ ಕೇಳುತ್ತಿದೆ. ಆಮಿಷ ಒಡ್ಡಿ ಸಾಮಾನ್ಯ ವ್ಯಕ್ತಿಗಳ ಹಕ್ಕು ಕಸಿಯಬಾರದು. ಮತದಾನದ ಹಕ್ಕು ಮತ್ತಷ್ಟು ಗಟ್ಟಿಗೊಳಿಸಬೇಕು. ಜನ ಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಲು ಕೆಆರ್‌ಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಕೆಆರ್‌ಎಸ್ ಅಭ್ಯರ್ಥಿ ಪ್ರದೀಪ್‌ಕುಮಾರ್, ‘ವಸಂತನರಸಾಪುರ ಕೈಗಾರಿಕೆಗೆ ಭೂಮಿ ನೀಡಿದ ರೈತರಿಗೆ ಭೂ ಪರಿಹಾರ ಕೊಟ್ಟಿಲ್ಲ. ಯಾವುದೇ ಕೆಲಸವನ್ನೂ ಕೊಟ್ಟಿಲ್ಲ. ರೈತರನ್ನು ಅತಂತ್ರರನ್ನಾಗಿ ಮಾಡಿದ್ದಾರೆ. ಈಗ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ಮಾಡುತ್ತಿದ್ದಾರೆ’ ಎಂದರು.
ಕೆಆರ್‌ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರಕುಮಾರ್ ಗೌಡ, ‘ಕೆಲಸ ಕೇಳಲು ಹೋದ ಬಡವರ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಪ್ರಶ್ನಿಸುವುದನ್ನು ಅಪರಾಧ ಎಂಬಂತೆ ಬಿಂಬಿಸುತ್ತಿದ್ದಾರೆ. ಬಡವರ ರಕ್ತ ಹೀರುತ್ತಿರುವ ವ್ಯವಸ್ಥೆ ಬದಲಾಯಿಸಲು ಈ ಬಾರಿ ಕೆಆರ್‌ಎಸ್ ಅಭ್ಯರ್ಥಿಗೆ ಮತ ನೀಡಬೇಕು’ ಎಂದು ಕೇಳಿಕೊಂಡರು.
ನಗರದ ಎಸ್.ಎಸ್.ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ರ್‍ಯಾಲಿ ನಡೆಯಿತು. ಕೆಆರ್‌ಎಸ್ ರಾಜ್ಯ ಕಾರ್ಯದರ್ಶಿ ಸೋಮಸುಂದರ್, ಪದಾಧಿಕಾರಿಗಳಾದ ಆರ್.ಮಹಾಂತೇಶ್, ಡಿ.ಸಿ.ಜಯಂತ್, ರವಿಕುಮಾರ್, ಚನ್ನಯ್ಯ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.