ADVERTISEMENT

ಕೊರಟಗೆರೆ: ನಾಮಫಲಕವಿಲ್ಲದ ಸರ್ಕಾರಿ ಬಸ್ ನಿಲ್ದಾಣ

ಎ.ಆರ್.ಚಿದಂಬರ
Published 24 ಜನವರಿ 2026, 7:25 IST
Last Updated 24 ಜನವರಿ 2026, 7:25 IST
ನಾಮಫಲಕ ಇಲ್ಲದ ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣ
ನಾಮಫಲಕ ಇಲ್ಲದ ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣ   

ಕೊರಟಗೆರೆ: 1989ರಲ್ಲಿ ನಿರ್ಮಾಣಗೊಂಡ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣಕ್ಕೆ ಇಂದಿಗೂ ನಾಮಫಲಕವೇ ಇಲ್ಲ. ಮೂರು ದಶಕ ಕಳೆದರೂ ಇದು ಸರ್ಕಾರಿ ಬಸ್ ನಿಲ್ದಾಣ ಎನ್ನುವ ಕನಿಷ್ಠ ಗುರುತನ್ನೂ ಸಾರಿಗೆ ಇಲಾಖೆ ಒದಗಿಸಿಲ್ಲ.

ಪಟ್ಟಣಕ್ಕೆ ಹೊಸದಾಗಿ ಬರುವ ಪ್ರಯಾಣಿಕರು ಬಸ್ ನಿಲ್ದಾಣ ಹುಡುಕುತ್ತಾ ದಾರಿ ಕೇಳುವ ಸ್ಥಿತಿ ಇದೆ.

ಸಾರ್ವಜನಿಕರಿಂದ ದೂರು, ಒತ್ತಡ ಹೆಚ್ಚಾದಾಗ ಮಾತ್ರ ಗ್ರಾಮೀಣ ಭಾಗಗಳಿಗೆ ಬಸ್ ಸೇವೆ ಆರಂಭಿಸುವ ಸಾರಿಗೆ ಇಲಾಖೆ, ಕೆಲವೇ ದಿನಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಆ ಬಸ್‌ಗಳನ್ನು ಸ್ಥಗಿತಗೊಳಿಸುತ್ತದೆ. ಸಿದ್ಧರಬೆಟ್ಟ, ಕೋಳಾಲ, ಬೊಮ್ಮಲದೇವಿಪುರ ಮಾರ್ಗಗಳ ಬಸ್‌ಗಳನ್ನು ಹೀಗೆಯೇ ಏಕಾಏಕಿ ನಿಲ್ಲಿಸಲಾಗಿದೆ ಎಂಬ ದೂರು ಇದೆ.

ADVERTISEMENT

ಕಾಲೇಜಿಗೆ ತೆರಳಲು ಬಸ್ ಇದ್ದಾಗ ಸುಲಭವಾಗಿತ್ತು. ಈಗ ಬಸ್ ಇಲ್ಲ. ದಿನಕ್ಕೆ ಎರಡು ಆಟೊ ಬದಲಿಸಿ ಹೋಗಬೇಕು. ಖರ್ಚು ಜಾಸ್ತಿ, ಸಮಯ ವ್ಯರ್ಥ ಎಂದು ತಾಲ್ಲೂಕಿನ ಗಡಿ ಅಕ್ಕಾಜಿಹಳ್ಳಿ ಭಾಗದ ವಿದ್ಯಾರ್ಥಿ ರಮೇಶ್ ಬೇಸರ ವ್ಯಕ್ತಪಡಿಸಿದರು.

ಬಸ್ ಸೇವೆ ಸ್ಥಗಿತಗೊಂಡ ಪರಿಣಾಮ ಜನರು ಆಟೊ ಹಾಗೂ ದ್ವಿಚಕ್ರ ವಾಹನಗಳನ್ನೇ ಅವಲಂಬಿಸಬೇಕಿದೆ. ನಿಯಮ ಮೀರಿ ಸಣ್ಣ ಆಟೊಗಳಲ್ಲಿ ಹೆಚ್ಚು ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದು ಇದು ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.

ನಾಮಫಲಕ ಇಲ್ಲದ ಕೊರಟಗೆರೆ ಸರ್ಕಾರಿ ಬಸ್ ನಿಲ್ದಾಣ

ಬಸ್ ನಿಲ್ದಾಣದಲ್ಲಿ ಮೂಲ ಸೌಕರ್ಯಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶುದ್ಧ ನೀರಿನ ಯಂತ್ರ ಕೆಟ್ಟು ವರ್ಷಗಳಾದರೂ ದುರಸ್ತಿ ಮಾಡಿಲ್ಲ. ನಿಲ್ದಾಣದ ಚಾವಣಿ ಹಾಳಾಗಿ ದುರ್ವಾಸನೆ ಬೀರುತ್ತಿದೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಸೋರಿಕೆಯಾಗಿ ಪ್ರಯಾಣಿಕರು ನೆಲದ ಮೇಲೆಯೇ ನಿಲ್ಲುವಂತಾಗಿದೆ.

ನೀರು ಇಲ್ಲದೆ ಕಾಯಬೇಕು. ಮಕ್ಕಳನ್ನ ಹಿಡಿದುಕೊಂಡು ನಿಲ್ಲೋದು ಕಷ್ಟ. ಬಾಟಲಿ ನೀರಿಗೆ ಮೊರೆ ಹೋಗಬೇಕಾದ ಅನಿವಾರ್ಯವಿದೆ. ಇದು ಬಸ್ ನಿಲ್ದಾಣವೊ? ಗೋದಾಮಾ? ತಿಳಿಯುತ್ತಿಲ್ಲ ಎಂದು ವೃದ್ಧೆ ಮಂಜಮ್ಮ ದೂರಿದ್ದಾರೆ.

ಕೆಟ್ಟಿರುವ ಶುಧ್ಧ ನೀರಿನ ಯಂತ್ರ.
ಛಾವಣಿ ಸಂಪೂರ್ಣ ಹಾಸುಗಟ್ಟಿರುವುದು(ಜಾಡು).
ಮಾಹಿತಿ ಶೂನ್ಯ
ಬಸ್ ನಿಲ್ದಾಣದಲ್ಲಿ ವೇಳಾಪಟ್ಟಿ ಮಾರ್ಗಸೂಚಿ ಫಲಕ ದಿಕ್ಕು ಸೂಚಕ ಫಲಕಗಳಿಲ್ಲ. ಬಸ್‌ಗಳ ಮಾರ್ಗ ತಿಳಿಯುಲು ಪ್ರಯಾಣಿಕರು ಚಾಲಕರು ಕಂಡಕ್ಟರ್‌ಗಳನ್ನೇ ಅವಲಂಬಿಸಬೇಕಿದೆ ಎಂದು ಕೋಳಾಲ ಗ್ರಾಮದ ಲಕ್ಷ್ಮೀ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.