
ಕುಣಿಗಲ್ ದೊಡ್ಡಕೆರೆ ರಾಮಬಾಣ ಹಂತದ ಕಾಲುವೆಗೆ 15 ವರ್ಷದ ನಂತರ ನೀರು ಹರಿಸುವ ಕಾರ್ಯಕ್ಕೆ ಶಾಸಕ ಡಾ.ರಂಗನಾಥ್ ಚಾಲನೆ ನೀಡಿದರು
ಕುಣಿಗಲ್: ಕುಣಿಗಲ್ ದೊಡ್ಡಕೆರೆ ರಾಮಬಾಣ ಹಂತದ ನಾಲೆಯ ತೂಬಿನಲ್ಲಿ ನಿರ್ಮಿಸಿದ್ದ ಕಾಂಕ್ರಿಟ್ ತಡೆಯನ್ನು ಶಾಸಕ ಡಾ.ರಂಗನಾಥ್ ಭಾನುವಾರ ತೆರವುಗೊಳಿಸಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೊಡ್ಡಕೆರೆ ವ್ಯಾಪ್ತಿಯ ಲಕ್ಷ್ಮೀದೇವಿ ಹಂತ ಮತ್ತು ರಾಮಬಾಣಹಂತ ಕಾಲುವೆಗಳಿದ್ದು, ಕೆರೆ ನೀರು ತುಂಬಿದ್ದರೂ ನಾಲೆಗಳಲ್ಲಿ ಹರಿಯದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ಗಮನಹರಿಸಿದ್ದು ಮುಳುಗು ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ತೂಬಿನ ಪ್ರದೇಶದಲ್ಲಿ ನಾಲೆಗೆ ನೀರು ಹರಿಯದಂತೆ ತೂಬಿನಲ್ಲಿ ಕಾಂಕ್ರಿಟ್ ತಡೆ ನಿರ್ಮಿಸಿರುವುದು ಕಂಡುಬಂದಿದೆ. ವಿಶೇಷ ಕಾರ್ಯಪಡೆ ಮೂಲಕ ನೀರಿನಾಳದಲ್ಲಿರುವ ತೂಬಿನ ಕಾಂಕ್ರಿಟ್ ತಡೆಗೋಡೆ ತೆರವುಗೊಳಿಸಿ ನೀರು ಹರಿಸಲಾಗುತ್ತಿದೆ ಎಂದರು.
ಸದ್ಯಕ್ಕೆ ಪ್ರಾಯೋಗಿಕವಾಗಿ ನೀರು ಹರಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಲೆ ದುರಸ್ತಿಗೊಳಿಸಿ ಆದ್ಯತೆ ಮೇರೆಗೆ ಕೃಷಿಗೆ ನೀರು ನೀಡುವ ಬಗ್ಗೆ ಗಮನಹರಿಸಲಾಗುವುದು ಎಂದರು.
ಹೇಮಾವತಿ ನಾಲ ವಲಯದ ಎಇಇ ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣಗೌಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.