
ಕುಣಿಗಲ್: ಪುರಸಭೆ ಬಸ್ ನಿಲ್ದಾಣದ ನಿರ್ಮಾಣಕ್ಕಾಗಿ ಭೂಮಿ ಪೂಜೆ ನಡೆದು ಎರಡು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಇದರಿಂದಾಗಿ ನಾಗರಿಕರು ಮತ್ತು ಪ್ರಯಾಣಿಕರ ಪರದಾಟ ಮುಂದುವರಿದಿದೆ. ತಾತ್ಕಾಲಿಕ ಪರ್ಯಾಯ ವ್ಯವಸ್ಥೆಗೆ ಆಗ್ರಹಿಸಿದ್ದಾರೆ.
ನಿಲ್ದಾಣದ ಹಿನ್ನೆಲೆ: ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಕುಣಿಗಲ್‌ನಲ್ಲಿ ಪುರಸಭೆ ಬಸ್ ನಿಲ್ದಾಣ ಕಾರ್ಯನಿರ್ವಹಿಸುತ್ತಿತ್ತು. ತುಮಕೂರು, ಮೈಸೂರು, ಮಾಗಡಿ, ಬೆಂಗಳೂರು-ಹಾಸನ ಮಾರ್ಗದ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಇಲ್ಲಿಂದ ಕಾರ್ಯ ನಿರ್ವಹಿಸುತ್ತಿದ್ದವು. ನಿಲ್ದಾಣ ಪ್ರದೇಶದಲ್ಲಿದ್ದ ಅಂಗಡಿಗಳ ಬಾಡಿಗೆಯಿಂದ ಪುರಸಭೆಗೆ ಆದಾಯ ಬರುತ್ತಿತ್ತು. ಕಾಲ ಕ್ರಮೇಣ, ಸ್ಟಡ್ ಫಾರಂ ಬಳಿ ಸಾರಿಗೆ ಸಂಸ್ಥೆ ನಿಲ್ದಾಣ ನಿರ್ಮಾಣವಾದ ನಂತರ ಪುರಸಭೆ ನಿಲ್ದಾಣ ಖಾಸಗಿ ಬಸ್‌ಗಳಿಗೆ ಮೀಸಲಾಯಿತು.
ನವೀಕರಣದ ಆರಂಭ ಮತ್ತು ಸ್ಥಗಿತ: 2005ರಲ್ಲಿ ಪುರಸಭೆಯು ಆಧುನಿಕ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶದಿಂದ ಹಳೆ ನಿಲ್ದಾಣ ಮತ್ತು ಅಂಗಡಿಗಳನ್ನು ತೆರವುಗೊಳಿಸಿತು. ಇದರಿಂದ ಬಸ್ ನಿಲ್ದಾಣವನ್ನೇ ಅವಲಂಬಿಸಿದ್ದ ಅನೇಕ ಕುಟುಂಬಗಳು ಆರ್ಥಿಕ ತೊಂದರೆಗೆ ಒಳಗಾದವು. ಆದರೆ, ಹೊಸ ನಿಲ್ದಾಣ ನಿರ್ಮಾಣ ಕಾರ್ಯ ಸಾಗಲಿಲ್ಲ. ಆ ಪ್ರದೇಶದಲ್ಲಿ ಖಾಸಗಿ ನಿಲ್ದಾಣ ಮತ್ತು ಅಂಗಡಿಗಳು ಹುಟ್ಟಿಕೊಂಡು, 20 ವರ್ಷಗಳಿಂದ ಸ್ಥಳೀಯ ಜನರ ಜೀವನಾಧಾರವಾಗಿ ನಿಂತವು.
ಇತ್ತೀಚಿನ ಪ್ರಯತ್ನ: ಶಾಸಕ ಡಾ.ರಂಗನಾಥ್ ಪುನಃ ಆಯ್ಕೆಯಾದ ನಂತರ ಬಸ್ ನಿಲ್ದಾಣ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಯಿತು. ಹಿಂದಿನ ಪುರಸಭೆ ಜನಪ್ರತಿನಿಧಿಗಳು ತಮ್ಮ ಅಧಿಕಾರಾವಧಿ ಕೊನೆ ದಿನ ನಿರ್ಮಾಣದ ಭೂಮಿ ಪೂಜೆ ನಡೆಸಿದರು. ಪೂಜೆ ನಂತರ ಗುಡಿಸಲು ಅಂಗಡಿಗಳು ಮತ್ತು ಶಿಥಿಲವಾದ ತಂಗುದಾಣಗಳನ್ನು ತೆರವುಗೊಳಿಸಲಾಯಿತು.
ಪರಿಣಾಮ: ಪರ್ಯಾಯ ನಿಲ್ದಾಣ ಸೌಲಭ್ಯಗಳಿಲ್ಲದ ಕಾರಣ, ಖಾಸಗಿ ಮತ್ತು ಸಾರಿಗೆ ಸಂಸ್ಥೆಯ ಬಸ್‌ಗಳು ಹುಚ್ಚಮಾಸ್ತಿಗೌಡ ವೃತ್ತದ ರಸ್ತೆಯಲ್ಲೇ ನಿಲ್ಲಬೇಕಾಗಿದೆ. ಇದರಿಂದ ಆ ಪ್ರದೇಶ ತುಂಬಿ ಹೋಗಿ ಜನಸಂದಣಿ ಮತ್ತು ಅವ್ಯವಸ್ಥೆ ಉಂಟಾಗಿದೆ. ಸಾರಿಗೆ ಸಂಸ್ಥೆಯ ಘಟಕಕ್ಕೆ ಹೋಗುವ ಮಾರ್ಗವೂ ಅವ್ಯವಸ್ಥಿತವಾಗಿದೆ. ಬಸ್ ನಿಲ್ದಾಣದ ಪ್ರದೇಶದಲ್ಲಿ ಅನಧಿಕೃತ ಮೀನು ಮಾರುಕಟ್ಟೆ, ಪರ್ವತಾಂಜನೇಯ ಸ್ವಾಮಿ ದೇವಾಲಯ ಮತ್ತು ಎಚ್.ಬಿ.ಪೆಟ್ರೋಲ್ ಬಂಕ್ ಮಾತ್ರ ಉಳಿದಿದೆ.
ನಾಗರಿಕರ ಮನವಿ: ಪುರಸಭೆಗೆ ಜನಪ್ರತಿನಿಧಿಗಳ ಆಡಳಿತವಿಲ್ಲದಿರುವುದರಿಂದ ಅಧಿಕಾರಿಗಳು ಮತ್ತು ಶಾಸಕರು ನೇರವಾಗಿ ಹಸ್ತಕ್ಷೇಪ ಮಾಡಿ ಕಾಮಗಾರಿಯನ್ನು ಕ್ಷಿಪ್ರವಾಗಿ ಆರಂಭಿಸಬೇಕು. ನಿಗದಿತ ಸಮಯದಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮನವಿ
‘ನಮ್ಮ ತಾಯಿ ಗೌರಮ್ಮ 30 ವರ್ಷಗಳಿಂದ ಬಸ್ ನಿಲ್ದಾಣದಲ್ಲಿ ವಡೆ ಬೊಂಡ ಮಾರಾಟ ಮಾಡುತ್ತಾ ಜೀವನ ನಡೆಸಿದ್ದಾರೆ. ಕಳೆದ ಎರಡು ತಿಂಗಳಿಂದ ವ್ಯಾಪಾರ ಮಾಡಲು ಶಕ್ತಿ ಇದ್ದರೂ ಅವಕಾಶವಿಲ್ಲದ ಕಾರಣ ಮೌನಿ ಆಗಿದ್ದಾರೆ. ಬಸ್ ನಿಲ್ದಾಣ ನಂಬಿ ಐವತ್ತಕ್ಕೂ ಹೆಚ್ಚು ಕುಟುಂಬಗಳು ಜೀವನ ನಡೆಸುತ್ತಿದ್ದವು. ಈಗ ಜಾಗವಿಲ್ಲದಂತಾಗಿದೆ. ಪರ್ಯಾಯ ವ್ಯವಸ್ಥೆ ಮಾಡದ ಅಧಿಕಾರಿಗಳ ನಿರ್ಣಯದಿಂದ ದುಡಿದು ತಿನ್ನುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಪುಟ್‌ಪಾತ್‌ನಲ್ಲಿಟ್ಟರೆ ಪೋಲಿಸರ ಕಾಟ. ಗೂಡಂಗಡಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ’. ಎಲ್ಲೆಗೌಡ ನಿರ್ದೇಶಕ ಟೌನ್ ಸಹಕಾರ ಸಂಘ
ಅಂಗಡಿಗಳನ್ನು ತೆರವು ಮಾಡಿದ ಕಾರಣ ಜೀವನ ಕಷ್ಟವಾಗಿದೆ. ಅಂಗಡಿಗಳನ್ನು ತೆರವು ಮಾಡಿ ಎರಡು ತಿಂಗಳಾದರೂ ಪ್ರಾರಂಭ ಮಾಡದ ಕಾರಣ ಸಮಸ್ಯೆ ಹೆಚ್ಚಾಗಿದೆ.–ರಾಮಕೃಷ್ಣ, ಮಡಕೆಹಳ್ಳಿ
ಬಸ್ ನಿಲ್ದಾಣದಲ್ಲಿ 30 ಖಾಸಗಿ ಬಸ್‌ಗಳು ಮಾಗಡಿ ಬೆಂಗಳೂರು ತುಮಕೂರು ಮೈಸೂರು ಕಡೆ ಸಂಚರಿಸುತ್ತಿದ್ದು ಶಕ್ತಿ ಯೋಜನೆಯಿಂದ ಖಾಸಗಿ ಬಸ್‌ಗಳಿಗೆ ಹೊಡೆತ ಬಿದ್ದಿವೆ.–ವೆಂಕಟೇಶ, ಖಾಸಗಿ ಬಸ್ ಮಾಲೀಕ
ಕಳೆದ 20 ವರ್ಷಗಳ ಹಿಂದೆ ಬಸ್ ನಿಲ್ದಾಣ ನಿರ್ಮಿಸಲು ಇದೇ ರೀತಿಯಲ್ಲಿ ತೆರವು ಮಾಡಲಾಗಿತ್ತು. ಈಗ ಮತ್ತೆ ಅದೇ ಸ್ಥಿತಿ ನಿರ್ಮಾಣ ಮಾಡದೆ ಕಾಮಗಾರಿ ಪ್ರಾರಂಭಿಸಬೇಕು. ಪರ್ಯಾಯ ವ್ಯವಸ್ಥೆಗೆ ಶಾಸಕರು ಗಮನಹರಿಸಬೇಕುವೈ.ಎಚ್.ರವಿಚಂದ್ರ ಕುಣಿಗಲ್, ಅಭಿವೃದ್ಧಿ ಫೋರಂ ಸಂಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.