ADVERTISEMENT

ಕುಪ್ಪೂರು ಸ್ವಾಮೀಜಿ ಸ್ಮರಣೋತ್ಸವ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 4:19 IST
Last Updated 25 ಅಕ್ಟೋಬರ್ 2021, 4:19 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಲಿಂಗೈಕ್ಯ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕುಪ್ಪೂರು ವಾಣಿ ಮಾಸ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು. ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ವಿವಿಧ ಮಠಾಧೀಶರು ಇದ್ದರು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದ ಲಿಂಗೈಕ್ಯ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಕುಪ್ಪೂರು ವಾಣಿ ಮಾಸ ಪತ್ರಿಕೆ ಬಿಡುಗಡೆ ಗೊಳಿಸಲಾಯಿತು. ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ವಿವಿಧ ಮಠಾಧೀಶರು ಇದ್ದರು   

ಚಿಕ್ಕನಾಯಕನಹಳ್ಳಿ: ಕುಪ್ಪೂರು ಗದ್ದಿಗೆ ಮಠದ ಲಿಂಗೈಕ್ಯ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಚಿಕ್ಕವಯಸ್ಸಿನಲ್ಲಿಯೇ ಮಠದ ಜವಾಬ್ದಾರಿ ಹೊತ್ತು, ಮಠದ ಪರಂಪರೆ ಉಳಿಸುವ ಜತೆ ಸಾಮಾಜಿಕ ಮತ್ತು ಧಾರ್ಮಿಕ ಶಕ್ತಿಯ ಕೊಂಡಿಯಾಗಿದ್ದರು ಎಂದು ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠದಲ್ಲಿ ಭಾನುವಾರ ನಡೆದ ಲಿಂಗೈಕ್ಯ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ರಾಜ್ಯದ ಎಲ್ಲ ಸ್ವಾಮೀಜಿಗಳ ಜತೆ ಉತ್ತಮ ಸಂಬಂಧ ಹೊಂದಿದ್ದ ಸ್ವಾಮೀಜಿ, ಯಾವಾಗಲೂ ಹಸನ್ಮುಖರಾಗಿರುತ್ತಿದ್ದರು ಎಂದರು.

ADVERTISEMENT

ಚಿಕ್ಕವಯಸ್ಸಿನಲ್ಲೇ ಲಿಂಗೈಕ್ಯರಾಗಿರುವುದು ದುಃಖದ ಸಂಗತಿಯಾಗಿದ್ದು, ನೂತನವಾಗಿ ಮಠದ ಸ್ವಾಮೀಜಿಯಾಗಿ ಆಯ್ಕೆಯಾಗಿರುವ ತೇಜಸ್ ಕುಮಾರ್‌ಗೆ ಎಲ್ಲರೂ ಸಹಕಾರ ನೀಡಿ ಮಠದ ಅಭಿವೃದ್ಧಿಗೆ ಸಮಾಜ ಕೈಜೋಡಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಲಿಂಗೈಕ್ಯ ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಮಾವತಿ ನೀರಿಗಾಗಿ ಹೋರಾಟ ಹಾಗೂ ಪಾದಯಾತ್ರೆ ಮಾಡಿದ್ದರು. ಚಿಕ್ಕವಯಸ್ಸಿನಲ್ಲಿಯೇ ಮಠದ ಅಭಿವೃದ್ಧಿ ಹಾಗೂ ಸಮಾಜದ ಏಳಿಗೆಗೆ ಶ್ರಮಿಸುತ್ತಿದ್ದರು ಎಂದರು.

‘ರಾಜ್ಯದಲ್ಲಿ ಮಠಗಳು ಅನ್ನದಾಸೋಹ ಹಾಗೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿ ಬೆನ್ನೆಲುಬಾಗಿ ದುಡಿಯುತ್ತಿವೆ. ಕುಪ್ಪೂರು ಗದ್ದಿಗೆ ಮಠದಿಂದ ಕುಪ್ಪೂರು ವಿದ್ಯಾಸಂಸ್ಥೆ ಸ್ಥಾಪಿಸಿದ್ದರೂ, ಯಾವುದೋ ಒಂದು ಘಟನೆಯಿಂದ ವಿದ್ಯಾಸಂಸ್ಥೆಯನ್ನು ಮುಚ್ಚುವಂತಾಯಿತು. ಈ ನಿಟ್ಟಿನಲ್ಲಿ ತುಮಕೂರು ಸಿದ್ದಗಂಗಾ ಸಂಸ್ಥೆಯ ಮಠದ ಕುಪ್ಪೂರಿನಲ್ಲಿರುವ ಸಿದ್ದಗಂಗಾ ಶಾಖಾ ಮಠದ ಸಂಸ್ಥೆಯಲ್ಲಿ 30 ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಯಲ್ಲಿ ಕುಪ್ಪೂರು ಗದ್ದಿಗೆ ಮಠದಲ್ಲಿ ಉಳಿದುಕೊಳ್ಳಲು ಏರ್ಪಾಟು ಮಾಡಲು ಸಿದ್ದಗಂಗಾ ಮಠದ ಸ್ವಾಮೀಜಿಯೊಂದಿಗೆ ಮಾತುಕತೆ ನಡೆಸಿದ್ದೇನೆ’ ಎಂದರು.

ಕಾರ್ಯಕ್ರಮದಲ್ಲಿ ಕುಪ್ಪೂರು ವಾಣಿ ಮಾಸಪತ್ರಿಕೆಯನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬಿಡುಗಡೆ ಮಾಡಿದರು.

ಹುಬ್ಬಳ್ಳಿ ಮೂರುಸಾವಿರ ಮಠದ ಡಾ.ಗುರುಸಿದ್ದರಾಜ ಯೋಗೀಂದ್ರ ಸ್ವಾಮೀಜಿ, ಬಾಳೆಹೊನ್ನೂರು ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಕುಪ್ಪೂರು ಮಠದ ತೇಜಸ್ ಕುಮಾರ್ ಸ್ವಾಮೀಜಿ, ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ತಮ್ಮಡಿಹಳ್ಳಿ ವಿರಕ್ತ ಮಠದ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ, ತಿಪಟೂರು ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, ತಾವರೇಕೆರೆ- ಶಿರಾ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹಾಗೂ 50ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.