ADVERTISEMENT

ಕುಪ್ಪೂರು ಸ್ವಾಮೀಜಿ ಕ್ರಿಯಾ ಸಮಾಧಿ

ಕುಪ್ಪೂರು ಮಠದ ಉತ್ತರಾಧಿಕಾರಿಯಾಗಿ 13 ವರ್ಷದ ತೇಜಸ್‌ ನೇಮಕ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 3:18 IST
Last Updated 27 ಸೆಪ್ಟೆಂಬರ್ 2021, 3:18 IST
ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯ ಕ್ರೀಯಾ ಸಮಾಧಿ (ಎಡಚಿತ್ರ), ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದ ತೇಜಸ್‌ ಶಿವಾಚಾರ್ಯ ಸ್ವಾಮೀಜಿ
ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯ ಕ್ರೀಯಾ ಸಮಾಧಿ (ಎಡಚಿತ್ರ), ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದ ತೇಜಸ್‌ ಶಿವಾಚಾರ್ಯ ಸ್ವಾಮೀಜಿ   

ಚಿಕ್ಕನಾಯಕನಹಳ್ಳಿ: ತಾಲ್ಲೂಕು ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಅಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅಂತಿಮ ಸಂಸ್ಕಾರ ಮಠದ ಆವರಣದಲ್ಲಿ ಭಾನುವಾರ
ನೆರವೇರಿತು.

ಹಲವು ಮಠಗಳ ಸ್ವಾಮಿಗಳು ಹಾಗೂ ರಾಜಕೀಯ ನಾಯಕರ ನೇತೃತ್ವದಲ್ಲಿ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಅಂತಿಮ ವಿಧಿವಿಧಾನಗಳನ್ನು ನೇರವೇರಿಸಲಾಯಿತು.

ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಸ್ವಾಮೀಜಿ ಅವರ ಸಹೋದರನ ಪುತ್ರ, 8ನೇ ತರಗತಿ ವಿದ್ಯಾರ್ಥಿ ತೇಜಸ್‌ ಅವರನ್ನು ಕುಪ್ಪೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಯಿತು.

ADVERTISEMENT

ಎಡೆಯೂರು ಮಠದ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ವೀರಶೈವ ಪದ್ಧತಿಯಂತೆ ಕ್ರಿಯಾ ಸಮಾಧಿ ನೆರವೇರಿಸಲಾಯಿತು. ಅಂತಿಮ ಸಂಸ್ಕಾರದ ವೇಳೆ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹೊನ್ನವಳ್ಳಿ ಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮಾದೀಹಳ್ಳಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ತಿಪಟೂರು ಷಡಕ್ಷರದ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬೀರೂರು, ಅಂಬಲದೇವರ ಮಠ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್‌, ಸಿ.ಬಿ.ಸುರೇಶ್‌ ಬಾಬು, ಮುರುಳಿಧರ ಹಾಲಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಸಾವಿರಾರು ಭಕ್ತರು ಅಂತಿಮ ನಮನ ಸಲ್ಲಿಸಿದರು.

ಕಣ್ಣೀರಿಡುತ್ತಲೇ ಮಗನನ್ನು ಬೀಳ್ಕೊಟ್ಟ ತಾಯಿ: ಮಗನನ್ನು ಸನ್ಯಾಸ್ಯತ್ವಕ್ಕೆ ನೇಮಿಸುತ್ತಿದ್ದಂತೆತೇಜಸ್‌ ಅವರ ತಂದೆ ತಾಯಿಯ ದುಃಖ ಮುಗಿಲುಮುಟ್ಟಿತ್ತು. ಮಗನನ್ನು ತಬ್ಬಿಕೊಂಡು ತಾಯಿ ಕಾಂತಾಮಣಿ ಹಾಗೂ ತಂದೆ ಮಹೇಶ್ ಮತ್ತು ಕುಟುಂಬಸ್ಥರು ದುಃಖಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.