ತುಮಕೂರು: ಜಿಲ್ಲೆಯಲ್ಲಿ ಸರ್ಕಾರದಿಂದ ನಡೆಯುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ನಿಲಯ ಪಾಲಕರ ಕೊರತೆ ಕಾಡುತ್ತಿದ್ದು, ಹಾಸ್ಟೆಲ್ ನಿರ್ವಹಣೆಯ ಹೊಣೆ ಯಾರದ್ದು ಎಂಬ ಪ್ರಶ್ನೆ ಎದುರಾಗಿದೆ. ವಿದ್ಯಾರ್ಥಿಗಳು ಅಭದ್ರತೆಯಲ್ಲಿ ದಿನ ದೂಡುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ವಾರ್ಡನ್ ಹುದ್ದೆಗಳು ಖಾಲಿ ಉಳಿದಿವೆ. ಮೂರು ಇಲಾಖೆಗಳಿಂದ 233 ಹಾಸ್ಟೆಲ್ ನಡೆಯುತ್ತಿದ್ದು, ಸಾವಿರಾರು ಮಕ್ಕಳು ಆಶ್ರಯ ಪಡೆದಿದ್ದಾರೆ. ಪ್ರತಿಯೊಂದು ಹಾಸ್ಟೆಲ್‌ಗೆ ಒಬ್ಬ ವಾರ್ಡನ್ ನೇಮಿಸಬೇಕು. ಆದರೆ, 121 ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ 112 ಹುದ್ದೆಗಳು ಖಾಲಿ ಇವೆ.
ಒಬ್ಬರಿಗೆ ಮೂರು–ನಾಲ್ಕು ನಿಲಯಗಳ ಜವಾಬ್ದಾರಿ ನೀಡಿದ್ದು, ವಾರ್ಡನ್‌ಗಳು ಕಾರ್ಯದ ಒತ್ತಡದಿಂದ ಬಸವಳಿದಿದ್ದಾರೆ. ಪ್ರತಿ ದಿನ ಹಾಸ್ಟೆಲ್‌ಗೆ ಹೋಗಿ ಮಕ್ಕಳ ದಾಖಲಾತಿ, ಊಟ–ತಿಂಡಿ ವಿತರಣೆಯ ಪರಿಶೀಲನೆ ನಡೆಸಬೇಕಾದವರು ಇತ್ತ ತಿರುಗಿಯೂ ನೋಡುತ್ತಿಲ್ಲ. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಬೆಳವಣಿಗೆಯಾಗಿಲ್ಲ.
ಜಿಲ್ಲೆಯ ವಿವಿಧೆಡೆ ಸಮಾಜ ಕಲ್ಯಾಣ ಇಲಾಖೆಯ 104 ಹಾಸ್ಟೆಲ್‌ಗಳಿವೆ. ಕೇವಲ 58 ಮಂದಿ ವಾರ್ಡನ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬರು ನಾಲ್ಕು ನಿಲಯಗಳ ಪ್ರಭಾರ ವಹಿಸಿಕೊಂಡಿದ್ದಾರೆ. ಪ್ರಮುಖವಾಗಿ ಪಾವಗಡ, ಮಧುಗಿರಿಯಂತಹ ಹಿಂದುಳಿದ ತಾಲ್ಲೂಕುಗಳಲ್ಲೇ ವಾರ್ಡನ್‌ಗಳ ಸಮಸ್ಯೆ ಇದೆ. ಇದರ ಜತೆಗೆ ಇಲಾಖೆಯ ಕೆಲಸಕ್ಕೂ ಅವರನ್ನು ಬಳಸಿಕೊಳ್ಳುತ್ತಿದ್ದು, ಹಾಸ್ಟೆಲ್‌ಗೆ ಹೋಗುವುದೇ ಅಪರೂಪ ಎಂಬಂತಾಗಿದೆ.
ಸಂವಿಧಾನ ದಿನಾಚರಣೆ, ಸರ್ಕಾರದ ವಿವಿಧ ಯೋಜನೆಗಳ ಕುರಿತ ಪ್ರಚಾರಕ್ಕೆ ನಿಲಯ ಪಾಲಕರನ್ನು ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾ ಆಡಳಿತದಿಂದ ಕಳೆದ ಸೆ.15ರಂದು ನಡೆದ ಮಾನವ ಸರಪಳಿ ಸಮಯದಲ್ಲಿ ಒಬ್ಬ ವಾರ್ಡನ್‌ಗೆ ಮೂರು–ನಾಲ್ಕು ಗ್ರಾಮ ಪಂಚಾಯಿತಿಗಳ ಜವಾಬ್ದಾರಿ ನೀಡಲಾಗಿತ್ತು. ಹಳ್ಳಿಯ ಮಟ್ಟದಲ್ಲಿ ಕೆಲಸ ನಿರ್ವಹಿಸಿದ್ದರು. ಜನರನ್ನು ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಂತಹ ಕಾರ್ಯಗಳ ಒತ್ತಡದ ಮಧ್ಯೆ ಸಿಲುಕುವ ನಿಲಯ ಪಾಲಕರು ಹಾಸ್ಟೆಲ್ ಕಡೆ ಸುಳಿಯುತ್ತಿಲ್ಲ.
ಅಡುಗೆ ಸಿಬ್ಬಂದಿಯೂ ಇಲ್ಲ: ಹಲವು ವಿದ್ಯಾರ್ಥಿ ನಿಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಡುಗೆ ಸಿಬ್ಬಂದಿ ನಿಯೋಜಿಸಿಲ್ಲ. ಹೊರಗುತ್ತಿಗೆಯಡಿ ಅಡುಗೆಯವರನ್ನು ನೇಮಿಸಿಕೊಂಡಿದ್ದು, ಒಂದು ಹಾಸ್ಟೆಲ್‌ನಲ್ಲಿ ಕೇವಲ ನಾಲ್ಕು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಇವರು ಎಲ್ಲ ಮಕ್ಕಳಿಗೆ ಉಣಬಡಿಸಲು ಪರದಾಡುತ್ತಿದ್ದಾರೆ. ಶೌಚಾಲಯ, ಹಾಸ್ಟೆಲ್ ಸ್ವಚ್ಛತೆಯ ಕೆಲಸವನ್ನೂ ಇವರೇ ಮಾಡಬೇಕಾಗಿದೆ. ಅತಿಯಾದ ಒತ್ತಡದಿಂದ ಕೆಲವರು ಕೆಲಸ ಬಿಟ್ಟು ಹೋಗಿದ್ದಾರೆ.
ರಾತ್ರಿ ಕಾವಲುಗಾರರಿಲ್ಲ
ವಿದ್ಯಾರ್ಥಿನಿಯರ ಹಾಸ್ಟೆಲ್ ಹೊರೆತು ಪಡಿಸಿದರೆ ಉಳಿದ ವಿದ್ಯಾರ್ಥಿ ನಿಲಯಗಳಲ್ಲಿ ರಾತ್ರಿ ಕಾವಲುಗಾರರಿಲ್ಲ. ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳ ಓಡಾಟಕ್ಕೆ ಕಡಿವಾಣ ಇಲ್ಲದಂತಾಗಿದೆ. ‘ಬಹುತೇಕ ವಿದ್ಯಾರ್ಥಿಗಳು ಮಧ್ಯರಾತ್ರಿಯ ತನಕ ಹಾಸ್ಟೆಲ್ ಸೇರುವುದಿಲ್ಲ. ಪುಂಡ ಪೋಕರಿಗಳು ರಾತ್ರೋರಾತ್ರಿ ಹಾಸ್ಟೆಲ್‌ಗೆ ನುಗ್ಗುತ್ತಿದ್ದಾರೆ. ಅವರನ್ನು ನಿಯಂತ್ರಿಸುವ ಕೆಲಸವಾಗುತ್ತಿಲ್ಲ. ಹೊರಗಿನಿಂದ ಬಂದವರು ನಿಲಯದ ಒಳಗಡೆ ಬೈಕ್ ನಿಲ್ಲಿಸಿ ಹೋಗುತ್ತಾರೆ. ಕನಿಷ್ಠ ಅವರನ್ನು ಪ್ರಶ್ನಿಸುವವರು ಇಲ್ಲ’ ಎಂದು ರಾಜೀವ್‌ಗಾಂಧಿ ನಗರದ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಹಾಸ್ಟೆಲ್‌ನ ವಿದ್ಯಾರ್ಥಿಯೊಬ್ಬರು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.