ಗುಬ್ಬಿ: ಕೃಷಿ ಜೊತೆ ಹೈನುಗಾರಿಕೆ ರೂಢಿಸಿಕೊಂಡಲ್ಲಿ ರೈತರು ಉತ್ತಮ ಆದಾಯ ಪಡೆಯಲು ಸಾಧ್ಯ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ ಮಠ ಗ್ರಾಮದಲ್ಲಿ ಶನಿವಾರ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಸ್ಥಾಪಿಸಲು ಮುಂದೆ ಬಂದಿರುವುದು ಉತ್ತಮ ಬೆಳವಣಿಗೆ. ಸಾಧ್ಯವಿರುವಷ್ಟು ಹಸುಗಳನ್ನು ಸಾಕಿಕೊಂಡಲ್ಲಿ ನಿರಂತರ ಆದಾಯ ಕಾಣಲು ಸಾಧ್ಯ. ಇದರಿಂದ ಕೃಷಿ ಚಟುವಟಿಕೆ ಹಾಗೂ ಕುಟುಂಬದ ನಿರ್ವಹಣೆಗೆ ಅನುಕೂಲವಾಗುವುದು. ಉತ್ತಮ ಉದ್ದೇಶದಿಂದ ಸಹಕಾರ ಸಂಘ ಸ್ಥಾಪಿಸಲಾಗಿದ್ದು, ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ಎಲ್ಲರೂ ಒಗ್ಗಟ್ಟಿನಿಂದ ಇದ್ದು ಸಹಕಾರ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು ಎಂದರು.
ತುಮುಲ್ ನಿರ್ದೇಶಕಿ ಭಾರತಿ ಶ್ರೀನಿವಾಸ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಯಾವುದೇ ರಾಜಕೀಯ ಬೆರೆಸದೆ ಪ್ರಾಮಾಣಿಕವಾಗಿ ಮುಂದುವರಿಸಿಕೊಂಡು ಹೋದಲ್ಲಿ ಅನುಕೂಲವಾಗುವುದು. ಹಾಲಿನ ಉತ್ಪಾದನೆ ಹೆಚ್ಚಾದಲ್ಲಿ ಉತ್ತಮ ಲಾಭ ದೊರೆಯುವುದು. ಮಹಿಳಾ ಸಹಕಾರ ಸಂಘ ಆಗಿರುವುದರಿಂದ ಯಾವುದೇ ಅವ್ಯವಹಾರಕ್ಕೆ ಅವಕಾಶ ವಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಚಂದ್ರಶೇಕರ್ ಕೇದಾನುರಿ, ಸಣ್ಣರಂಗಯ್ಯ, ಗುರು ರೇಣುಕಾರಾಧ್ಯ, ರಮೇಶ್, ಸಿದ್ದರಾಮಣ್ಣ, ಕೆ.ಟಿ. ರಾಜು, ಭೂಮಿರಾಜು, ಶಿವಾನಂದ್,
ಕೆಂಪರಾಜು, ಲಕ್ಷ್ಮೀ ಕಾಂತರಾಜು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.