ADVERTISEMENT

ಉತ್ತಮ ಯೋಚನೆಯಿಂದ ಸಮಸ್ಯೆ ಪರಿಹಾರ

ಪ್ರಶಿಕ್ಷಣಾರ್ಥಿಗಳ ಸಮಾಲೋಚನೆ ಮಜುಲುಗಳ ಕುರಿತು ಪಿ.ನಾರಾಯಣ ಆಚಾರ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2018, 10:59 IST
Last Updated 29 ಜೂನ್ 2018, 10:59 IST
ಮೈಸೂರಿನ ವಿದ್ಯಾವಿಕಾಸ ಕಾಲೇಜಿನ ಸ್ನಾತಕೋತ್ತರ 'ಸಮಾಜ ಕಾರ್ಯ ಅಧ್ಯಯನ ವಿಭಾಗ'ದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪಿ.ನಾರಾಯಣ ಆಚಾರ್ಯ, ಸಾ.ಚಿ.ರಾಜ್ ಕುಮಾರ್ ಇದ್ದರು.
ಮೈಸೂರಿನ ವಿದ್ಯಾವಿಕಾಸ ಕಾಲೇಜಿನ ಸ್ನಾತಕೋತ್ತರ 'ಸಮಾಜ ಕಾರ್ಯ ಅಧ್ಯಯನ ವಿಭಾಗ'ದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಪಿ.ನಾರಾಯಣ ಆಚಾರ್ಯ, ಸಾ.ಚಿ.ರಾಜ್ ಕುಮಾರ್ ಇದ್ದರು.   

ತುಮಕೂರು: ಕೌಟುಂಬಿಕ ಸಂಬಂಧಗಳು ಇಂದು ಸೂಕ್ಷ್ಮವಾಗಿದ್ದು, ಅವುಗಳನ್ನು ಸೌಹಾರ್ದ ರೀತಿಯಲ್ಲಿ ಉತ್ತಮಪಡಿಸಲು ಇದಕ್ಕೆ ನಿಯೋಜನೆಗೊಂಡಿರುವ ವ್ಯಕ್ತಿಗಳು, ಸಂಘ ಸಂಸ್ಥೆಗಳು ಸೇರಿದಂತೆ ಅಧಿಕಾರಿಗಳು ಹೆಚ್ಚು ಕಾಳಜಿವಹಿಸಬೇಕು ಎಂದು ಜಿಲ್ಲಾ ನ್ಯಾಯಲಯದ ಕುಟುಂಬ ಕಲ್ಯಾಣ ಸಮಿತಿ ಅಧ್ಯಕ್ಷ ಪಿ.ನಾರಾಯಣ ಆಚಾರ್ಯ ತಿಳಿಸಿದರು.

ನಗರ ಸಾಂತ್ವನ ಕೇಂದ್ರದಲ್ಲಿ ಒಂದು ತಿಂಗಳ ಕಾಲ ತರಬೇತಾರ್ಥಿಗಳಾಗಿ ಆಗಮಿಸಿ ಕ್ಷೇತ್ರ ಅಧ್ಯಯನ ಮುಗಿಸಿ ವಾಪಸ್ಸಾಗುತ್ತಿರುವ ಮೈಸೂರಿನ ವಿದ್ಯಾವಿಕಾಸ ಕಾಲೇಜಿನ ಸ್ನಾತಕೋತ್ತರ 'ಸಮಾಜ ಕಾರ್ಯ ಅಧ್ಯಯನ ವಿಭಾಗ'ದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಸಮಾಲೋಚನೆಯ ಮಜಲುಗಳ ಬಗ್ಗೆ ಉಪನ್ಯಾಸ ನೀಡಿದ ಅವರು ಮಾತನಾಡಿದರು.

ನಂತರ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿಯೂ ವಿವಾಹದ ಸಂಪ್ರದಾಯ ಎದುರಾಗುತ್ತದೆ. ವೈವಾಹಿಕ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಪ್ರೀತಿಪೂರ್ವಕವಾಗಿಯೇ ಸ್ವೀಕರಿಸಬೇಕು. ಉತ್ತಮ ಆಲೋಚನಾ ಶಕ್ತಿಯಿಂದ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು.

ADVERTISEMENT

ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಶೋಷಣೆಗೆ ಒಳಗಾಗುತ್ತಿದ್ದು, ದೌಜನ್ಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸುವಲ್ಲಿ ಕಟ್ಟು ನಿಟ್ಟಿನ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಕಾನೂನಿನ ಮಾರ್ಗೋಪಾಯಗಳನ್ನು ಹಿಡಿಯುವ ಮುನ್ನ ಸಮಾಲೋಚನೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನೇಕ ಯೋಜನೆಗಳು ಜಾರಿಗೆ ಬಂದಿವೆ ಎಂದರು.

ಪರಸ್ಪರ ಸಮಾಲೋಚನೆ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಎಂತಹ ಸಮಸ್ಯೆಗಳನ್ನಾದರೂ ಬಗೆಹರಿಸಲು ಸಾಧ್ಯವಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.

ಸಾಂತ್ವನ ಕೇಂದ್ರದ ಸಲಹೆಗಾರ ಸಾ.ಚಿ.ರಾಜಕುಮಾರ ಮಾತನಾಡಿ, ಈವರೆಗೆ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕೌಟುಂಬಿಕ ಸಮಸ್ಯೆಗಳು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಗೌಪ್ಯವಾಗಿಯೇ ಸಮಾಲೋಚನೆ ನಡೆಸಲಾಗಿದೆ ಎಂದರು.

ಎಲ್ಲರೂ ಎಲ್ಲ ಪ್ರಕರಣಗಳನ್ನು ಕಾನೂನಾತ್ಮಕವಾಗಿಯೇ ಇತ್ಯರ್ಥಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಸಮಾಲೋನಾ ಪ್ರಕ್ರಿಯೆಗಳ ಮೂಲಕ ಬಹಳಷ್ಟು ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂಬುದಕ್ಕೆ ಈ ಕೇಂದ್ರದಲ್ಲಿ ದಾಖಲಾಗಿ ಇತ್ಯರ್ಥವಾಗಿರುವ ಪ್ರಕರಣಗಳೇ ಸಾಕ್ಷಿ ಎಂದರು.

ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಪ್ರಶಿಕ್ಷಣಾರ್ಥಿಗಳು ತಮ್ಮ ಅಧ್ಯಯನದ ಜೊತೆಗೆ ವಾಸ್ತವ ಪ್ರಕರಣಗಳ ಬಗ್ಗೆಯೂ ಗಮನ ಹರಿಸುವುದರಿಂದ ಮುಂದಿನ ವೃತ್ತಿಗೆ ಮತ್ತು ಬದುಕಿಗೆ ಹೆಚ್ಚು ಪೂರಕವಾಗುತ್ತವೆ ಎಂದರು.

ಸಾಂತ್ವನ ಕೇಂದ್ರದ ಸಮಾಲೋಚಕರಾದ ಅಂಬುಜಾಕ್ಷಿ, ಪಾರ್ವತಮ್ಮ, ಸವಿತಾ, ಸಮಾಜ ಕಾರ್ಯಕರ್ತ ಪ್ರಹ್ಲಾದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.