ಚಿರತೆ
ಗುಬ್ಬಿ: ತಾಲ್ಲೂಕಿನ ನೇರಳೆಕೆರೆಯಲ್ಲಿ ಬುಧವಾರ ಕುರಿ ಕಾಯುತ್ತಿದ್ದ ನರಸಿಂಹಮೂರ್ತಿ (62) ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.
ನರಸಿಂಹಮೂರ್ತಿ ಗ್ರಾಮದ ಸಮೀಪದಲ್ಲಿ ಮತ್ತೊಬ್ಬರೊಂದಿಗೆ ಕುರಿ ಮೇಯಿಸುತ್ತಿದ್ದಾಗ ಚಿರತೆ ಎರಗಿ ಭುಜ ಮತ್ತು ತಲೆಗೆ ಗಾಯಗೊಳಿಸಿ, ಅಲ್ಲಿಂದ ಓಡಿಹೋಗಿದೆ. ಕುರಿಗಾಹಿಗಳ ಚೀರಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅರಣ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲಾಖೆ ನಿಯಮಾನುಸಾರ ಕ್ರಮ ಕೈಗೊಂಡು ಗಾಯಾಳುವಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಈ ಭಾಗದಲ್ಲಿ ಚಿರತೆಗಳು ಹೆಚ್ಚಾಗುತ್ತಿರುವುದರಿಂದ ಅರಣ್ಯ ಇಲಾಖೆ ತುರ್ತುಕ್ರಮ ಕೈಗೊಂಡು ಚಿರತೆ ಸೆರೆ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಕಡಬ ಹೋಬಳಿ ಬಿ. ಕೋಡಿಹಳ್ಳಿ ಸಮೀಪ ಮತ್ತೊಂದು ಚಿರತೆ ಕಾಣಿಸಿಕೊಂಡು, ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿತ್ತು. ಅರಣ್ಯಾಧಿಕಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಗ್ರಾಮದ ಸಮೀಪದಲ್ಲಿ ಚಿರತೆ ಹಿಡಿಯಲು ಬೋನು ಇಟ್ಟಿರುವುದಾಗಿ ಅರಣ್ಯಾಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.