ಪಾವಗಡ ತಾಲ್ಲೂಕು ಚಿಕ್ಕಹಳ್ಳಿ ಬಳಿ ಭಾನುವಾರ ನಡೆದ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಮಾತನಾಡಿದರು
ಪಾವಗಡ: ತಳ ಸಮುದಾಯದವರು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಬೇಕು ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಚಿಕ್ಕಹಳ್ಳಿ ಗೇಟ್‌ನ ಅಂಬೇಡ್ಕರ್ ಕಾಲೊನಿಯಲ್ಲಿ ಭಾನುವಾರ ನಡೆದ ಬಲಮುರಿ ಗಣಪತಿ, ಸುಬ್ರಮಣ್ಯ ವಿಗ್ರಹ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯದ ಜನತೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಸ್ಥಾನಗಳನ್ನು ಅಲಂಕರಿಸುವಂತೆ ಶ್ರಮಿಸಬೇಕು. ಆ ಮೂಲಕ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಕಾಣಬೇಕು. ಕೇಂದ್ರ ಸರ್ಕಾರದಿಂದ ಪ್ರತಿವರ್ಷ ಬರುವ ಅನುದಾನದಲ್ಲಿ ಎಲ್ಲಾ ಸಮುದಾಯಗಳ ಅವಶ್ಯಕತೆಗೆ ತಕ್ಕಂತೆ ಅನುಕೂಲ ಮಾಡಿಕೊಟ್ಟು ಅಭಿವೃದ್ದಿಗೆ ಪ್ರಯತ್ನಿಸುತ್ತೇನೆ ಎಂದರು.
‘ರಾಜ್ಯ ಸರ್ಕಾರ ಬಿಟ್ಟಿ ಭಾಗ್ಯಗಳನ್ನು ನೀಡಿ ದಿವಾಳಿಯಾಗುತ್ತಿದೆ. ವಿಶ್ವ ವಿದ್ಯಾಲಯಗಳನ್ನು ಮುಚ್ಚುವ ಹಂತಕ್ಕೆ ಹೋಗಿದೆ. ಸಾಲ ತೀರಿಸಲು ಸಾಲ ಮಾಡಲಾಗುತ್ತಿದೆ. ವಿಷ ಕುಡಿಯಲು ಸಹಾ ಸರ್ಕಾರದಲ್ಲಿ ಹಣ ಇಲ್ಲ. ಗುತ್ತಿಗೆದಾರರು ಬಿಲ್ ನೀಡಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರ ಹೆಚ್ಚಿದ ಹಿನ್ನೆಲೆಯಲ್ಲಿ 6 ಮಂದಿ ಅಧಿಕಾರಿಗಳು ಮೃತಪಟ್ಟಿದ್ದಾರೆ. ಎಲ್ಲಾ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ನೀಡಿ ರಾಜ್ಯವನ್ನು ಲೂಟಿ ಮಾಡಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರದ ಬಳಿ ಹಣಕ್ಕಾಗಿ ಬೇಡುತ್ತಿದ್ದಾರೆ’ ಎಂದರು.
‘ತುಮಕೂರು-ರಾಯದುರ್ಗ ರೈಲ್ವೆ ಟೆಂಡರ್ ರದ್ದಾಗಿದ್ದು, ರೀ ಟೆಂಡರ್ ಆಗಿದೆ. ಪಾವಗಡದಿಂದ ಮಡಕಶಿರಾದವರೆಗೆ ಶೀಘ್ರದಲ್ಲೇ ರೈಲು ಕಾಮಗಾರಿ ಪೂರ್ಣಗೊಳಿಸುವ ಜವಾಬ್ದಾರಿ ನನ್ನದು. ತುಮಕೂರು- ಕಲ್ಯಾಣದುರ್ಗ ಕೆಷಿಪ್ ರಸ್ತೆ ಅಪ್‌ಗ್ರೇಡ್ ಆಗಿದ್ದು, ಎಲ್ಲಾ ಟೋಲ್‌ಗಳನ್ನು ತೆಗೆದು ಹಾಕಿಸಿ ರಸ್ತೆ ಅಭಿವೃದ್ಧಿ ಕಾರ್ಯವನ್ನು ಶೀಘ್ರದಲ್ಲಿಯೇ ಆರಂಭಿಸಿದಲಾಗುವುದು’ ಎಂದು ತಿಳಿಸಿದರು.
ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಸೊಗಡು ವೆಂಕಟೇಶ್ ಮಾತನಾಡಿದರು.
ಮಾಧಾರ ಚನ್ನಯ್ಯ ಸ್ವಾಮೀಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಅಂಜಪ್ಪ, ಸದಸ್ಯ ತಿಪ್ಪೇಸ್ವಾಮಿ, ಈರಣ್ಣ, ಅಶೋಕ್, ಜಿ.ಟಿ ಗಿರೀಶ್, ಕೆಂಚಗಾನಹಳ್ಳಿ ಗೋವಿಂದಪ್ಪ, ಅಕ್ಕಲಪ್ಪನಾಯ್ಡು, ರಾಜಶೇಖರ್, ಬಿ.ಹೊಸಹಳ್ಳಿ ಮಲ್ಲಿಕಾರ್ಜುನ, ಸತ್ಯನಾರಾಯಣ ಚೌದರಿ, ಕೊತ್ತೂರು ಹನುಮಂತರಾಯಪ್ಪ, ತಿಮ್ಮಾರೆಡ್ಡಿ, ಈರಣ್ಣ, ಬಲರಾಮರೆಡ್ಡಿ, ಆರ್.ಹನುಮಂತರಾಯ, ಹರೀಶ್ ಕುಮಾರ್, ನರಸಿಂಹ, ಅರುಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.