ADVERTISEMENT

5ಕ್ಕೆಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಸಭೆ

‘ಮಠದ ಹಳ್ಳ’ ಏತ ನೀರಾವರಿ ಯೋಜನೆಗೆ ಭೂಮಿಪೂಜೆ: ಉಪಮುಖ್ಯಮಂತ್ರಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:02 IST
Last Updated 26 ಜೂನ್ 2025, 16:02 IST
ಗುಬ್ಬಿ ತಾಲ್ಲೂಕಿನ ಮಠದ ಹಳ್ಳ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್
ಗುಬ್ಬಿ ತಾಲ್ಲೂಕಿನ ಮಠದ ಹಳ್ಳ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್   

ಗುಬ್ಬಿ: ಜೂನ್ 30ರಂದು ನಿಗದಿಯಾಗಿದ್ದ ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್ ಸಭೆಯನ್ನು ಕೇಂದ್ರ ಸಚಿವ ವಿ. ಸೋಮಣ್ಣ ಮನವಿ ಮೇರೆಗೆ ಜುಲೈ 5ಕ್ಕೆ ನಿಗದಿಪಡಿಸಲಾಗಿದೆ. ಸಭೆಯ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

ಗುಬ್ಬಿ ಹಾಗೂ ಶಿರಾ ತಾಲ್ಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ₹50 ಕೋಟಿ ವೆಚ್ಚದ ‘ಮಠದ ಹಳ್ಳ’ ಏತ ನೀರಾವರಿ ಯೋಜನೆಗೆ ರಂಗನಹಳ್ಳಿಯ ಬಳಿ ಗುರುವಾರ ಭೂಮಿಪೂಜೆ ಹಾಗೂ ಎತ್ತಿನಹೊಳೆ ಮೇಲುಗಾಲುವೆ ವೀಕ್ಷಿಸಿ ಮಾತನಾಡಿದರು.

ಕುಡಿಯುವ ನೀರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಆರ್‌ಎಸ್ ಮತ್ತು ಹೇಮಾವತಿ ನದಿಗಳ ನೀರು ಸಮುದ್ರದ ಪಾಲಾಗದಂತೆ ನೋಡಿಕೊಂಡು ಅವುಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ADVERTISEMENT

ಕುಡಿಯುವ ನೀರಿನ ಉದ್ದೇಶಕ್ಕಾಗಿ ನಿರ್ಮಿಸಿರುವ ಎತ್ತಿನಹೊಳೆ ಮೇಲುಗಾಲುವೆ ಏಷ್ಯಾ ಖಂಡದಲ್ಲಿಯೇ ದೊಡ್ಡ ಮೇಲುಗಾಲುವೆ ಯೋಜನೆಯಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಜೊತೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಯೋಜನೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ದೊರೆತಿರುವುದು ಮತ್ತಷ್ಟು ಉತ್ತೇಜನ ನೀಡಿದೆ ಎಂದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದಲೇ ಯೋಜನೆ ಸಾಕಾರಗೊಳಿಸಲಾಗುತ್ತಿದೆ. ಶೀಘ್ರ ಯೋಜನೆ ಮುಗಿಸಿ ಲೋಕಾರ್ಪಣೆ ಗೊಳಿಸಲಾಗುವುದು. ರಾಜ್ಯದಲ್ಲಿರುವ ಕುಡಿಯುವ ನೀರಿನ ಎಲ್ಲ ಯೋಜನೆಗಳನ್ನು ಕೈಗೆತ್ತಿಕೊಂಡು ಶೀಘ್ರ ಮುಗಿಸಲು ಸಂಬಂಧಿಸಿದ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಜನಪರ ಯೋಜನೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಕಾರ ನೀಡುತ್ತಿರುವುದರಿಂದ ರಾಜ್ಯ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಮಾಜಿ ಶಾಸಕ ಕಿರಣ್ ಕುಮಾರ್, ನೀರಾವರಿ ತಾಂತ್ರಿಕ ಸಲಹೆಗಾರ ಜೈಪ್ರಕಾಶ್, ವಿಶ್ವೇಶ್ವರಯ್ಯ ಜಲ ನಿಗಮದ ಎಂ.ಡಿ. ಸಣ್ಣಚಿತ್ತಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಎನ್., ಜಿಪಂ ಸಿಇಒ ಪ್ರಭು ಜಿ., ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ., ತಹಶೀಲ್ದಾರ್ ಆರತಿ ಬಿ. ‍ಪಾಲ್ಗೊಂಡಿದ್ದರು.

Cut-off box - ಇತರ ಕೆರೆಗಳಿಗೆ ನೀರು ಹರಿಸಲು ಕ್ರಮ ಶಾಸಕ ಎಸ್.ಆರ್. ಶ್ರೀನಿವಾಸ್ ಮಾತನಾಡಿ ಮಠದಹಳ್ಳಕ್ಕೆ ನೀರು ಹರಿಸುವ ಯೋಜನೆಗೆ ಸರ್ಕಾರದ ಅನುಮೋದನೆ ದೊರೆತಾಗಲೂ ಜನ ನಂಬಿರಲಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದೇನೆ. ಅಂತಿಮವಾಗಿ ಯೋಜನೆ ಸಾಕಾರಗೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ. ಉಳಿದ ಕೆರೆಗಳಿಗೆ ಎತ್ತಿಹೊಳೆಯಿಂದ ನೀರು ಹರಿಸಲು ಕ್ರಮವಹಿಸಲಾಗುವುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.