ADVERTISEMENT

ಮಧುಗಿರಿ: ಅವ್ಯವಸ್ಥೆ ವಿರುದ್ಧ ಉಪ ಲೋಕಾಯುಕ್ತ ಕಿಡಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:37 IST
Last Updated 22 ನವೆಂಬರ್ 2025, 6:37 IST
ಮಧುಗಿರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಉಪ ಲೋಕಾಯುಕ್ತ ಬಿ.ವೀರಪ್ಪ ಆಲಿಸಿದರು
ಮಧುಗಿರಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ ಉಪ ಲೋಕಾಯುಕ್ತ ಬಿ.ವೀರಪ್ಪ ಆಲಿಸಿದರು   

ಮಧುಗಿರಿ: ಉಪ ಲೋಕಾಯುಕ್ತ ಬಿ.ವೀರಪ್ಪ ಶುಕ್ರವಾರ ಪಟ್ಟಣಕ್ಕೆ ಭೇಟಿ ನೀಡಿ ಅವ್ಯವಸ್ಥೆ ಕಂಡು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಚರಂಡಿ ಒಳಗೆ ಹೂಳು ತುಂಬಿಕೊಂಡಿದೆ. ಅದನ್ನು ಸ್ವಚ್ಛಗೊಳಿಸದೆ ಮೇಲ್ಭಾಗದಲ್ಲಿ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ನಿತ್ಯ ಇದೇ ರೀತಿ ಬ್ಲೀಚಿಂಗ್ ಪೌಡರ್ ಸಿಂಪಡಿಸುತ್ತೀರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ನಿತ್ಯ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುವ ಸ್ಥಳದಲ್ಲಿ ನಾಗರಿಕರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಂತಾಗಿದೆ. ಏಕೆ ನೀರಿನ ವ್ಯವಸ್ಥೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಇನ್ನೊಂದು ತಿಂಗಳಲ್ಲಿ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ, ನಿಯಂತ್ರಣಕ್ಕೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದಾಗ, ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರಿಂದ ಸರಿಯಾದ ಉತ್ತರ ಬಾರದ ಕಾರಣ ‘ನಿನ್ನ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇನೆ’ ಎಂದರು.

ಬಸ್ ನಿಲ್ದಾಣಕ್ಕೆ ಬಂದ ಉಪ ಲೋಕಾಯುಕ್ತರು, ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ತುಮಕೂರು ಕಾಲೇಜಿಗೆ ತೆರಳಲು ಬಸ್‌ಗಳ ಸಮಸ್ಯೆ ಇದೆ ಎಂದಾಗ, ತಕ್ಷಣ ಬಸ್‌ ವ್ಯವಸ್ಥೆ ಮಾಡಿ ವಿದ್ಯಾರ್ಥಿಗಳನ್ನು ತುಮಕೂರಿಗೆ ಕಳುಹಿಸಿಕೊಟ್ಟರು. ಕೆಎಸ್‌ಆರ್‌ಟಿಸಿ ಡಿಪೊ ವ್ಯವಸ್ಥಾಪಕರಿಗೆ ಮಕ್ಕಳಿಗೆ ತೊಂದರೆಯಾಗದಂತೆ ಬಸ್‌ ಕಲ್ಪಿಸಬೇಕು ಎಂದು ಸೂಚಿಸಿದರು.

ಎಆರ್‌ಟಿಒ ಕಚೇರಿಗೆ ಭೇಟಿ ನೀಡಿದ ಪರಿಶೀಲಸಿ ಮಾಹಿತಿ ಪಡೆದರು. ಸೂಕ್ತ ಮಾಹಿತ ನೀಡದ ಎಆರ್‌ಟಿಒ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಎಆರ್‌ಟಿಒ ವೀರಣ್ಣ ಹಾಗೂ ಕೆಲವು ಅಧಿಕಾರಿಗಳ ಮೊಬೈಲ್, ಯುಪಿಐ ಆ್ಯಪ್‌ಗಳನ್ನು ಪರಿಶೀಲಿಸಿದರು.

ಎಪಿಎಂಸಿ ಆವರಣದಲ್ಲಿ ರೈತರಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡಬೇಕು. ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಪಿಎಂಸಿ ಅಧಿಕಾರಿಗೆ ಸೂಚಿಸಿದರು.

ಪಟ್ಟಣದ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ಸಮಸ್ಯೆ ಆಲಿಸಿದರು.

ಲೋಕಾಯುಕ್ತ ಸಂಸ್ಥೆಯ ಉಪನಿಬಂಧಕ ಎನ್.ಅರವಿಂದ್, ಎಸ್.ಪಿ.ಲಕ್ಷ್ಮೀನಾರಾಯಣ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಜಿ.ಪಂ.ಡಿಎಸ್– 2 ಸಂಜೀವಪ್ಪ, ಉಪವಿಭಾಗಾಧಿಕಾರಿ ಗೊಟೋರು ಶಿವಪ್ಪ, ತಹಶೀಲ್ದಾರ್ ಶ್ರೀನಿವಾಸ್, ಡಿವೈಎಸ್‌ಪಿ ಮಂಜುನಾಥ್, ತಾ.ಪಂ.ಇಒ ಲಕ್ಷ್ಮಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.