ADVERTISEMENT

ಕೋವಿಡ್ ನೆಪದಲ್ಲಿ ಲೂಟಿ: ಸೊಗಡು ಶಿವಣ್ಣ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 4:55 IST
Last Updated 21 ಏಪ್ರಿಲ್ 2021, 4:55 IST
ಸೊಗಡು ಶಿವಣ್ಣ
ಸೊಗಡು ಶಿವಣ್ಣ   

ತುಮಕೂರು: ಕೋವಿಡ್–19 ಚಿಕಿತ್ಸೆ ನೆಪದಲ್ಲಿ ಲೂಟಿ ನಡೆದಿದೆ. ಭ್ರಷ್ಟಾಚಾರ ಮಿತಿಮೀರಿದೆ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅವರು ತಮ್ಮದೇ ಸರ್ಕಾರದ ವಿರುದ್ಧ ಇಲ್ಲಿ ಮಂಗಳವಾರ ವಾಗ್ದಾಳಿ ನಡೆಸಿದರು.

ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹಣಕೊಟ್ಟು ವರ್ಗಾವಣೆ ಮಾಡಿಸಿಕೊಂಡು ಬಂದಿ
ದ್ದೇವೆ. ಹಣ ಕೊಟ್ಟರೆ ಕೆಲಸ ಮಾಡಿ
ಕೊಡಲಾಗುವುದು. ಇಲ್ಲದಿದ್ದರೆ ಕಚೇರಿ
ಯಿಂದ ಹೊರಗೆ ಹೋಗಿ ಎನ್ನುತ್ತಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದು, ಜನರ ಹಿತ ಕಾಪಾಡುವವರು ಯಾರು ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸಂಸದರು, ಶಾಸಕರು, ಸಚಿವರ ಶಿಫಾರಸಿನ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ಕೆಲಸ ಮರೆತಿದ್ದಾರೆ. ಕಚೇರಿಗಳಲ್ಲಿ ಸಾರ್ವಜನಿಕರಿಗೆ ಅಧಿಕಾರಿಗಳು ಸಿಗುತ್ತಿಲ್ಲ. ಅಂತಹವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಜಿಲ್ಲೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೃತಕ ಅಭಾವ ಸೃಷ್ಟಿಸಲಾಗಿದ್ದು, ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈಗಿರುವ ವೆಂಟಿಲೇಟರ್, ಹಾಸಿಗೆಗಳು ಕೊರೊನಾ ಸೋಂಕಿತರ ಸಂಖ್ಯೆಗೆ ಹೋಲಿಸಿದರೆ ಸಾಲದಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ 50ರಷ್ಟು ಹಾಸಿಗೆ ಬಿಟ್ಟುಕೊಡುತ್ತಿಲ್ಲ. ಅಂತಹವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಲವ್ ಜಿಹಾದ್: ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಆರೋಪಿಸಿದರು.

ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ: ಮಧುಗಿರಿ ತಾಲ್ಲೂಕಿನ ತಾಡಿ ಗ್ರಾಮದಲ್ಲಿ ಜಾತ್ರೆ ಸಮಯದಲ್ಲಿ ಹೊಡೆದಾಟ ನಡೆದಿದ್ದು, ಪೊಲೀಸರು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ನಿರಪರಾಧಿಗಳ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ನಮ್ಮದೇ ಸರ್ಕಾರ ಇದ್ದರೂ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಕೊಡಿಸಲು ಆಗುತ್ತಿಲ್ಲ ಎಂದು ಮಧುಗಿರಿ ಬಿಜೆಪಿ ಮಂಡಲ ಅಧ್ಯಕ್ಷ ಮೂರ್ತಿ ಹೇಳಿದರು.

ಗ್ರಾಮಕ್ಕೆ ವಿಚಾರಣೆಗೆ ತೆರಳಿದ್ದ ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್ ಎಲ್ಲರ ಸಮ್ಮುಖದಲ್ಲೇ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಸದಾಶಿವಯ್ಯ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.