ಮಧುಗಿರಿ: ಪಟ್ಟಣದ ದಂಡಿನ ಮಾರಮ್ಮ ಜಾತ್ರೆ ಅಂಗವಾಗಿ ಶುಕ್ರವಾರ ಮುಂಜಾನೆ ಅಗ್ನಿಕೊಂಡ ಹಾಯುವ ಮೂಲಕ ಸಾವಿರಾರು ಭಕ್ತರು ಹರಕೆ ತೀರಿಸಿ ಸಂಭ್ರಮಿಸಿದರು.
ರಾಜ್ಯ ಹಾಗೂ ನೆರೆಯ ಸೀಮಾಂಧ್ರ ಪ್ರದೇಶದ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯದ ಮುಂಭಾಗ ಗುರುವಾರ ರಾತ್ರಿಯಿಂದಲೇ ಜಮಾಯಿಸಿದ್ದರು. ಸಾವಿರಾರು ಮಹಿಳೆಯರು ಆರತಿ ಮತ್ತು ದೀಪಗಳನ್ನು ಹೊತ್ತು ಅಗ್ನಿಕೊಂಡ ಬಳಿ ಕಾದು ಕುಳಿತಿದ್ದರು. ಕೆಲವರು ಕೋಳಿಯನ್ನು ದೇವಿಗೆ ಅರ್ಪಿಸಿ ಜಾತ್ರೆಯ ಆವರಣದಲ್ಲಿ ಬಂಧು ಮತ್ತು ಮಿತ್ರರಿಗೆ ಅಡುಗೆ ಮಾಡಿ ಊಟ ಬಡಿಸಿದರು.
ಶುಕ್ರವಾರ ಮುಂಜಾನೆ 5 ಗಂಟೆಯ ಸಮಯದಲ್ಲಿ ದೇವಾಲಯದ ಅರ್ಚಕ ಉತ್ಸವ ಮೂರ್ತಿಯನ್ನು ಹೊತ್ತು ಅಗ್ನಿಕೊಂಡ ಪ್ರವೇಶ ಮಾಡಿದರು. ನಂತರ ಹರಕೆ ಹೊತ್ತ ಭಕ್ತರು ಸಾಲಿನಲ್ಲಿ ನಿಂತು ಅಗ್ನಿಕೊಂಡ ಹಾಯ್ದರು.
ಅಗ್ನಿಕೊಂಡದ ಸುತ್ತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.