ADVERTISEMENT

ಮಧುಗಿರಿ ಜಾತ್ರೆಯಲ್ಲಿ ಹಳ್ಳಿಕಾರ್ ಖರೀದಿ ಜೋರು

ಜಾತ್ರೆ ರಂಗು ಹೆಚ್ಚಿಸಿದ ಜಾನುವಾರು * ರಾಜ್ಯದ ವಿವಿಧ ಜಿಲ್ಲೆಗಳಿಂದ ರಾಸು ಭಾಗಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 7:51 IST
Last Updated 20 ಫೆಬ್ರುವರಿ 2026, 7:51 IST
ಮಧುಗಿರಿ ಮಾರಮ್ಮನ ಜಾತ್ರೆಯಲ್ಲಿ ಗುಬ್ಬಿ ತಾಲ್ಲೂಕು ದೂಲನಹಳ್ಳಿ ರೈತ ನಂದೀಶ್ ಎಂಬುವವರ ಹಳ್ಳಿಕಾರ್ ಜೋಡಿ 
ಮಧುಗಿರಿ ಮಾರಮ್ಮನ ಜಾತ್ರೆಯಲ್ಲಿ ಗುಬ್ಬಿ ತಾಲ್ಲೂಕು ದೂಲನಹಳ್ಳಿ ರೈತ ನಂದೀಶ್ ಎಂಬುವವರ ಹಳ್ಳಿಕಾರ್ ಜೋಡಿ    

ಮಧುಗಿರಿ: ತಾಲ್ಲೂಕಿನ ಪ್ರಸಿದ್ಧ ಮಾರಮ್ಮ ಜಾತ್ರೆ ಈ ಬಾರಿ ಜಾನುವಾರು ಸಂಖ್ಯೆಯಲ್ಲಿ ಹೆಚ್ಚಳ ಕಂಡು ರೈತರು ಮತ್ತು ಪ್ರೇಕ್ಷಕರ ಗಮನ ಸೆಳೆದಿದೆ. ಸೀಮಾಂಧ್ರ (ಆಂಧ್ರಪ್ರದೇಶ) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ತಮ್ಮ ರಾಸುಗಳೊಂದಿಗೆ ಜಾತ್ರೆಗೆ ಆಗಮಿಸಿದ್ದು, ವ್ಯಾಪಾರ ಕಸುವು ಪಡೆದುಕೊಂಡಿದೆ.

ನ್ಯಾಯಾಲಯದ ಆವರಣದಿಂದ ರಾಘವೇಂದ್ರ ಕಾಲೇಜುವರೆಗಿನ ರಸ್ತೆ ಎರಡೂ ಬದಿ ರಾಸುಗಳನ್ನು ಕಟ್ಟಲಾಗಿತ್ತು. ವಿಶೇಷವಾಗಿ ಹಳ್ಳಿಕಾರ್ ತಳಿ ಜೋಡೆತ್ತುಗಳು, ನಾಟಿ ಮತ್ತು ಜರ್ಸಿ ತಳಿ ಜೋಡೆತ್ತು, ಹಾಲು ಹಲ್ಲಿನ ಕರುಗಳು ಮತ್ತು ಹಳ್ಳಿಕಾರ್ ಕರುಗಳು ಜಾತ್ರೆ ಪ್ರಮುಖ ಆಕರ್ಷಣೆಯಾಗಿದ್ದವು. ರೈತರು ತಮ್ಮ ರಾಸುಗಳನ್ನು ವಿವಿಧ ಅಲಂಕಾರಗಳೊಂದಿಗೆ ಸಿಂಗರಿಸಿಕೊಂಡು ಕರೆತಂದಿದ್ದು ಜಾತ್ರೆ ರಂಗು ಹೆಚ್ಚಿಸಿತ್ತು.

ಹಳ್ಳಿಕಾರ್ ತಳಿಯತ್ತಲೇ ಮೋಹ: ಬೇಸಾಯದ ಕೆಲಸಗಳಿಗೆ ಹೆಚ್ಚು ಸೂಕ್ತವಾದ ಹಳ್ಳಿಕಾರ್ ತಳಿ ಜೋಡೆತ್ತುಗಳತ್ತಲೇ ರೈತರ ಒಲವು ಹೆಚ್ಚಾಗಿ ಕಂಡು ಬಂದಿತು. ತುಮಕೂರು ಜಿಲ್ಲೆ ಸಿದ್ದಗಂಗಾ, ಕ್ಯಾಮೇನಹಳ್ಳಿ ಮತ್ತು ಸುಗ್ಗನಹಳ್ಳಿ ಜಾತ್ರೆಗಳಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದ ವ್ಯಾಪಾರ ನಡೆಯದ ಕಾರಣ ರೈತರು ಮತ್ತು ವ್ಯಾಪಾರಿಗಳು ಮಧುಗಿರಿ ಜಾತ್ರೆಗೆ ಮುಗಿಬಿದ್ದಿದ್ದು ರಾಸುಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎಂದು ತಿಳಿದು ಬಂದಿದೆ. ಹಿಂದೂಪುರ, ಮಡಕಶಿರಾ, ಅನಂತಪುರ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ರೈತರು ಖರೀದಿಗಾಗಿ ಆಗಮಿಸಿದ್ದರು.

ADVERTISEMENT

ದುಬಾರಿ ಬೆಲೆ: ಜಾತ್ರೆಯಲ್ಲಿ ಹಳ್ಳಿಕಾರ್ ಜೋಡೆತ್ತು ಮತ್ತು ಹಾಲು ಹಲ್ಲಿನ ಕರುಗಳಿಗೆ ಭಾರಿ ಬೆಲೆ ಏರಿಕೆ ಕಂಡು ಬಂದಿತು. ಕನಿಷ್ಠ ₹50 ಸಾವಿರದಿಂದ ಆರಂಭವಾಗಿ ₹2.5ಲಕ್ಷವರೆಗೆ ಬೆಲೆ ಕೇಳಿ ಬಂದಿತು. ಹೆಚ್ಚಿನ ಬೆಲೆಯಿಂದಾಗಿ ಸಣ್ಣ ರೈತರು ಖರೀದಿಸಲು ಹಿನ್ನಡೆಯಾದರೆ, ಗುಣಮಟ್ಟದ ಹಳ್ಳಿಕಾರ್ ಜೋಡಿಗಳಿಗಾಗಿ ಹೆಚ್ಚಿನ ಬೆಲೆ ನೀಡಲೂ ಕೆಲವು ರೈತರು ಸಿದ್ಧರಿದ್ದ ದೃಶ್ಯ ಕಂಡು ಬಂದಿತು.

ಗುಬ್ಬಿ ತಾಲ್ಲೂಕಿನ ದೂಲನಹಳ್ಳಿ ಗ್ರಾಮದ ರೈತ ನಂದೀಶ್ ಮಾತನಾಡಿ, ‘ನಾನು ಪ್ರತಿವರ್ಷ ಹಳ್ಳಿಕಾರ್ ಜೋಡೆತ್ತು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರ ಮಾಡುತ್ತೇನೆ. ಹಳ್ಳಿಕಾರ್ ತಳಿ ವ್ಯವಸಾಯ ಮತ್ತು ಎತ್ತಿನಗಾಡಿ ಎರಡಕ್ಕೂ ಸೂಕ್ತವಾಗಿದೆ. ಈ ಬಾರಿ ನಾನು ಮಧುಗಿರಿ ಜಾತ್ರೆಗೆ 5 ಜೋಡಿ ಹಳ್ಳಿಕಾರ್ ಎತ್ತುಗಳನ್ನು ತಂದಿದ್ದು, ಪ್ರತಿ ಜೋಡಿಗೆ ₹1.85 ಲಕ್ಷ ಬೆಲೆ ಹೇಳುತ್ತಿದ್ದೇನೆ’ ಎಂದು ಮಾಹಿತಿ ನೀಡಿದರು.

ರೈತ ಪಿ.ಕೆ.ರಂಗಸ್ವಾಮಿ, ‘ನಾನು ರೈತ ಕುಟುಂಬದಿಂದ ಬಂದವನು. ರಾಸುಗಳನ್ನು ನೋಡುವುದಕ್ಕಾಗಿಯೇ ಪ್ರತಿ ವರ್ಷ ಜಾತ್ರೆಗೆ ಬರುತ್ತೇನೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯ ಹಳ್ಳಿಕಾರ್ ಜೋಡಿಗಳನ್ನು ಕಂಡು ಖುಷಿಯಾಯಿತು’
ಎಂದು ಸಂತಸ ವ್ಯಕ್ತಪಡಿಸಿದರು.

ಜಾತ್ರೆಯಲ್ಲಿ ಹಳ್ಳಿಕಾರ್ ಜೋಡಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.