ADVERTISEMENT

ಮಧುಗಿರಿ: 98‌ ಮಂದಿಗೆ ಮಾಸಾಶನ ಮಂಜೂರಾತಿ ‍ಪತ್ರ

ಜನಸ್ಪಂದನ, ಖಾತಾ ಆಂದೋಲನದಲ್ಲಿ 100ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 4:19 IST
Last Updated 26 ಸೆಪ್ಟೆಂಬರ್ 2024, 4:19 IST
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಕವಣದಾಲ ಗ್ರಾಮದಲ್ಲಿ ಬುಧವಾರ ಜನಸ್ಪಂದನ ಮತ್ತು ಖಾತಾ ಆಂದೋಲನ ನಡೆಯಿತು
ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಕವಣದಾಲ ಗ್ರಾಮದಲ್ಲಿ ಬುಧವಾರ ಜನಸ್ಪಂದನ ಮತ್ತು ಖಾತಾ ಆಂದೋಲನ ನಡೆಯಿತು   

ಮಧುಗಿರಿ: ತಾಲ್ಲೂಕಿನ ದೊಡ್ಡೇರಿ ಹೋಬಳಿ ಕವಣದಾಲ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಆಡಳಿತದಿಂದ ಬುಧವಾರ ನಡೆದ ಜನಸ್ಪಂದನಾ ಮತ್ತು ಖಾತಾ ಆಂದೋಲನದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಯೋಜನೆಯಡಿಯಲ್ಲಿ 98‌ ಮಂದಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾಸಾಶನ ಮಂಜೂರಾತಿ ಆದೇಶ ಪತ್ರ ವಿತರಿಸಿದರು.

ಕಂದಾಯ ಇಲಾಖೆಗೆ ಸಾಗುವಳಿ ಚೀಟಿ ಆಧಾರದ ಮೇಲೆ ಪೌತಿ ಖಾತೆ, ಖಾತೆ ಮತ್ತು ಪಹಣಿ, ಮನೆ, ನಿವೇಶನ, ಸ್ಮಶಾನ, ರಸ್ತೆ ಅಭಿವೃದ್ಧಿ ಹಾಗೂ ಸರ್ಕಾರಿ ಜಾಗ ಒತ್ತುವರಿ ತೆರವು ಸೇರಿದಂತೆ 100ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾದವರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ₹26 ಸಾವಿರ ಕೋಟಿ ವೆಚ್ಚದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ಮುಂದಿನ ಮಳೆಗಾಲದೊಳಗಾಗಿ ಬಯಲು ಸೀಮೆ ಪ್ರದೇಶದ ಕೆರೆಗಳಿಗೆ ನೀರು ಹರಿಸುವ ಮೂಲಕ ಈ ಭಾಗದ ಜನರ ಆಸೆಯನ್ನು ರಾಜ್ಯ ಸರ್ಕಾರ ಈಡೇರಿಸುತ್ತಿದೆ. ಈ ಯೋಜನೆಗೆ ಇನ್ನೂ ₹6 ಸಾವಿರ ಕೋಟಿ ಅಗತ್ಯವಿದ್ದು, ಈ ಹಣವನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದರು.

ADVERTISEMENT

ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನ ಎತ್ತಿನಹೊಳೆ ಯೋಜನೆಯ ನೀರು ಹರಿಸುವ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹602 ಕೋಟಿಯನ್ನು ‌ಈಗಾಗಲೇ ಮಂಜೂರು ಮಾಡಿದೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳಲ್ಲಿ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದರು.

ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಮುಂದಿನ ದಿನಗಳಲ್ಲಿ ಹೋಬಳಿವಾರು ಪಿಂಚಣಿ ಅದಾಲತ್ ನಡೆಸಲಾಗುವುದು. ಬೆಸ್ಕಾಂ ಸಿಬ್ಬಂದಿ ಸಕಾಲಕ್ಕೆ ಸಾರ್ವಜನಿಕರ ದೂರವಾಣಿ ಕರೆಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸಬೇಕು. ಜಿಲ್ಲೆಯಲ್ಲಿ ಒಂದು ಲಕ್ಷ ಜಮೀನು ಪೌತಿ ಖಾತೆಗಳನ್ನು ಮಾಡಿಕೊಡುವ ಗುರಿ ಹೊಂದಲಾಗಿದೆ ಎಂದರು.

ಜಿ.ಪಂ ಸಿಇಒ ಜಿ.ಪ್ರಭು ಮಾತನಾಡಿ, ತಾಲ್ಲೂಕಿನಲ್ಲಿ 260 ಎಕರೆ ಸರ್ಕಾರಿ ಭೂಮಿ ಲಭ್ಯವಿದ್ದು, ಐದು ಸಾವಿರ ನಿವೇಶನವನ್ನು ಬಡವರಿಗೆ ನೀಡುವ ಗುರಿ ಹೊಂದಲಾಗಿದೆ. ಈಗಾಗಲೇ 1,500 ನಿವೇಶನ ಹಂಚಿಕೆಗೆ ಸಿದ್ಧವಾಗಿದೆ. ರಾಜೀವ್‌ ಗಾಂಧಿ ಆನ್‌ಲೈನ್ ತಂತ್ರಾಂಶದಲ್ಲಿ ಗೊಂದಲವಿರುವುದರಿಂದ ಆ ಸಮಸ್ಯೆ ಬಗೆಹರಿದ ತಕ್ಷಣ ಉಳಿದ ನಿವೇಶನಗಳ ಹಂಚಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೃತಪಟ್ಟ 40 ರಾಸುಗಳ ಮಾಲೀಕರಿಗೆ ತುಮುಲ್‌ನಿಂದ ₹20.50 ಸಾವಿರ ಪರಿಹಾರದ ಚೆಕ್‌ಗಳನ್ನು ನೀಡಲಾಯಿತು.

ಉಪವಿಭಾಗಾಧಿಕಾರಿ ಗೋಟೋರು ಶಿವಪ್ಪ, ತಹಶೀಲ್ದಾರ್ ಶಿರಾನ್ ತಾಜ್, ತಾ.ಪಂ.ಇಒ ಲಕ್ಷ್ಮಣ್, ಎಒ ಮಧುಸೂದನ್, ತುಮುಲ್ ವ್ಯವಸ್ಥಾಪಕ ಶ್ರೀನಿವಾಸ್, ಕೆಎಂಎಫ್ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು, ಡಿಡಿಪಿಐ ಗಿರಿಜಾ, ಇಒ ರಾಜಣ್ಣ, ಬಿಇಒ ಹನುಮಂತರಾಯಪ್ಪ, ಜಿ.ಪಂ.ಮಾಜಿ ಸದಸ್ಯ ಚೌಡಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ರತ್ನಮ್ಮ, ಉಪಾಧ್ಯಕ್ಷ ಕೂಟಮ್ಮ, ಪಿಡಿಒ ವಿಜಯಕುಮಾರ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.