
ಮಧುಗಿರಿ: ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿ ದೊಡ್ಡಮಾಲೂರಿನ ರೈತ ಡಿ.ಪಿ. ನರಸಿಂಹಮೂರ್ತಿ ರೇಷ್ಮೆ ಕೃಷಿಯಲ್ಲಿ ಯಶಸ್ಸು ಗಳಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ತಮ್ಮ 7.5 ಎಕರೆ ಜಮೀನಿನಲ್ಲಿ 6 ಅಡಿ ಸಾಲು 3 ಅಡಿಗೊಂದು ಪೈರು ನಾಟಿ ಮಾಡಿಸಿ ರೇಷ್ಮೆ ಕೃಷಿ ಆರಂಭಿಸಿದ್ದರು. ಉದ್ಯೋಗ ಖಾತ್ರಿ ಯೋಜನೆಯಿಂದ ಒಂದು ಎಕರೆ ಹಿಪ್ಪು ನೇರಳೆ ನಾಟಿ ಮಾಡುವುದಕ್ಕೆ ₹75 ಸಾವಿರ, ಹನಿ ನೀರಾವರಿಗೆ ಎಕರೆಗೆ ₹40 ಸಾವಿರ ಹಾಗೂ ಹುಳು ಸಾಕಾಣಿಕೆ ಮನೆಗೆ ₹3,37,500 ಪಡೆದಿದ್ದರು. ಮೂರು ಬ್ಯಾಚ್ ಮಾಡಿಕೊಂಡ ವರ್ಷಕ್ಕೆ 18 ಬ್ಯಾಚ್ ಬೆಳೆ ತೆಗೆಯುತ್ತಿದ್ದಾರೆ.
‘ಒಂದು ಬ್ಯಾಚ್‌ಗೆ 150ರಿಂದ 200 ಮೊಟ್ಟೆ ತರುತ್ತಿದ್ದು, 200 ಕೆಜಿ ಇಳುವರಿ ಬರುತ್ತಿದೆ. ಸದ್ಯ ರೇಷ್ಮೆ ಮಾರುಕಟ್ಟೆಯಲ್ಲಿ ಕೆಜಿಗೆ ₹760ರಿಂದ ₹900ರ ವರೆಗೆ ಬೆಲೆ ಸಿಗುತ್ತದೆ. ಸದ್ಯ ನಾಲ್ಕು ವರ್ಷದಲ್ಲಿ ಎಂದೂ ನಷ್ಟವಾಗಿಲ್ಲ. ಪೈರು ವ್ಯವಸ್ಥಿತವಾಗಿ ನಾಟಿ ಮಾಡಿದಾಗ ಅದಕ್ಕೆ ಒಳ್ಳೆಯ ಬೆಳಕಿನ ಜೊತೆಗೆ ಗಾಳಿಯಾಡಿದಾಗ ರೋಗ ಬರುವುದಿಲ್ಲ’ ಎನ್ನುತ್ತಾರೆ ನರಸಿಂಹಮೂರ್ತಿ.
ಹನಿ ನೀರಾವರಿ ಹೆಚ್ಚು ಉಪಯುಕ್ತ. ಬಯಲುಸೀಮೆ ಪ್ರದೇಶದಲ್ಲಿ ನೀರು ಉಳಿತಾಯದ ಜೊತೆಗೆ ಕೂಲಿಯಾಳುಗಳ ಖರ್ಚು ಸಹ ಉಳಿತಾಯವಾಗುತ್ತದೆ. ರೇಷ್ಮೆ ಸಾಕಾಣಿಕೆಗೆ ಶೇ 50ರಷ್ಟು ಖರ್ಚು ಬಂದರೂ, ಇನ್ನು ಶೇ 50ರಷ್ಟು ಲಾಭ ಬರುವುದರಲ್ಲಿ ಅನುಮಾನವಿಲ್ಲ. ಹಿಪ್ಪು ನೇರಳೆಗೆ ಸಕಾಲಕ್ಕೆ ನೀರಿನ ಜೊತೆಗೆ ಗೊಬ್ಬರ ಹಾಕಿದರೆ ಪೈರು ಚೆನ್ನಾಗಿ ಬರುತ್ತದೆ ಎಂದರು.
ಮಧುಗಿರಿ ತಾಲ್ಲೂಕು ಹಿಪ್ಪು ನೇರಳೆ ವ್ಯವಸಾಯಕ್ಕೆ ಪೂರಕ ಮಣ್ಣಿನ ಗುಣ ರೇಷ್ಮೆ ಹುಳು ಸಾಕಾಣೆಗೆ ಯೋಗ್ಯ ವಾತಾವರಣ ಹೊಂದಿದೆ. ಸಣ್ಣ ಮದ್ಯಮ ವರ್ಗದ ರೈತರಿಗೆ ರೇಷ್ಮೆ ಉತ್ತಮ ವಾಣಿಜ್ಯ ಬೆಳೆ.ಟಿ.ಲಕ್ಷ್ಮೀನರಸಯ್ಯ ರೇಷ್ಮೆ ಉಪನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.