ADVERTISEMENT

ತುಮಕೂರು | ನೀರು ಘಟಕ ನಿರ್ವಹಣೆಯನ್ನು ಪಂಚಾಯತಿಗಳು ನಿರ್ವಹಿಸಬೇಕು: ಸಿಇಒ ಜಿ.ಪ್ರಭು

​ಪ್ರಜಾವಾಣಿ ವಾರ್ತೆ
Published 11 ಜುಲೈ 2023, 14:07 IST
Last Updated 11 ಜುಲೈ 2023, 14:07 IST
ನೀರಿನ ಘಟಕ (ಪ್ರಾತಿನಿಧಿಕ ಚಿತ್ರ)
ನೀರಿನ ಘಟಕ (ಪ್ರಾತಿನಿಧಿಕ ಚಿತ್ರ)   

ತುಮಕೂರು: ಗ್ರಾಮೀಣ ಪ್ರದೇಶದ ಶುದ್ಧ ಕುಡಿಯುವ ನೀರಿನ ಘಟಕಗಳ (ಆರ್‌ಒ ಪ್ಲಾಂಟ್‌) ನಿರ್ವಹಣೆಯನ್ನು ಗ್ರಾಮ ಪಂಚಾಯಿತಿಗಳು ವಹಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಸೂಚಿಸಿದರು.

ನಗರದ ಜಿ.ಪಂ ಕಚೇರಿಯಲ್ಲಿ ಸೋಮವಾರ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಗ್ರಾಮಾಂತರ ಭಾಗದ 1,586 ಕುಡಿಯುವ ನೀರಿನ ಘಟಕಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳೇ ನಿರ್ವಹಿಸಬೇಕು. ಖಾಸಗಿ ಏಜೆನ್ಸಿಗಳು ನಿರ್ವಹಣೆ ಮಾಡುತ್ತಿದ್ದಲ್ಲಿ ಕೂಡಲೇ ಆಯಾ ಗ್ರಾ.ಪಂಗೆ ಹಸ್ತಾಂತರಿಸಬೇಕು’ ಎಂದು ತಿಳಿಸಿದರು.

ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ನಳ ಸಂಪರ್ಕಕ್ಕಾಗಿ ರಸ್ತೆಗಳಲ್ಲಿ ತೆಗೆದಿರುವ ಗುಂಡಿಗಳನ್ನು ತಪ್ಪದೇ ಮುಚ್ಚಬೇಕು. ಸಾಂಕ್ರಾಮಿಕವಲ್ಲದ ರೋಗ ಪತ್ತೆ ಹಚ್ಚಲು ಆಶಾ, ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಮನೆ-ಮನೆ ಭೇಟಿ ನೀಡುವ ಕಾರ್ಯಕ್ರಮವನ್ನು ತಕ್ಷಣವೇ ಪ್ರಾರಂಭಿಸಬೇಕು ಎಂದು ನಿರ್ದೇಶಿಸಿದರು.

ADVERTISEMENT

ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕ್ರಿಯಾ ಯೋಜನೆ ತಯಾರಿಸಿ ನೀರು ಮತ್ತು ನೈರ್ಮಲ್ಯ ಸಮಿತಿಯಿಂದ ಅನುಮೋದನೆ ಪಡೆದು, ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರವೀಶ್‌, 2023-24ನೇ ಸಾಲಿನ 2,215 ಮತ್ತು 4,215 ಲೆಕ್ಕ ಶೀರ್ಷಿಕೆಯಡಿ ವಿಶೇಷ ಅಭಿವೃದ್ಧಿ ಯೋಜನೆಯ ಮುಂದುವರಿದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ 314 ಕಾಮಗಾರಿ ಕೈಗೊಳ್ಳಲು ತಯಾರಿಸಿರುವ ಕ್ರಿಯಾ ಯೋಜನೆಯನ್ನು ಸಮಿತಿಯ ಅನುಮೋದನೆಗಾಗಿ ಮಂಡಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಒಟ್ಟು 123 ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಉದ್ದೇಶಿಸಿದ್ದು, ಸದರಿ ಕಾಮಗಾರಿಗಳಿಗೆ ₹3.60 ಕೋಟಿ ಅನುದಾನದ ಅಗತ್ಯವಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಡಿಎಚ್‌ಒ ಡಾ.ಡಿ.ಎನ್‌.ಮಂಜುನಾಥ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಾಗರಾಜು, ಸಹಾಯಕ ಕೃಷಿ ನಿರ್ದೇಶಕ ಚಿದಾನಂದ ಸ್ವಾಮಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.