ತುಮಕೂರು: ಗುತ್ತಿಗೆ ನೌಕರರಿಗೆ ಕಡ್ಡಾಯವಾಗಿ ಕನಿಷ್ಠ ₹14 ಸಾವಿರ ವೇತನ ನೀಡಬೇಕು. ಇಲ್ಲದಿದ್ದರೆ ಸಂಬಂಧಿಸಿದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮ ವಹಿಸಲಾಗುವುದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಎಚ್ಚರಿಸಿದರು.
ನಗರದಲ್ಲಿ ಶುಕ್ರವಾರ ಆರೋಗ್ಯ ಇಲಾಖೆಯ ಹೊರಗುತ್ತಿಗೆ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಾರ್ಷಿಕ ಮಹೋತ್ಸವ, ಅಭಿನಂದನಾ ಸಮಾರಂಭ, ನೌಕರರ ಒಗ್ಗಟ್ಟು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹೊರಗುತ್ತಿಗೆಯಡಿ ದುಡಿಯುತ್ತಿರುವವರಿಗೆ ಕಾಯಂ ನೌಕರರಂತೆ ಹೆರಿಗೆ ರಜೆ, ಭತ್ಯೆ ಸೌಲಭ್ಯ ಕಲ್ಪಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು. ಬಹುಪಾಲು ನೌಕರರು ಆರ್ಥಿಕವಾಗಿ ಹಿಂದುಳಿದಿದ್ದು, ಅವರಿಗೆ ನೌಕರಿ ಅನಿವಾರ್ಯವಾಗಿದೆ. ಹೆರಿಗೆ ಸಮಯದಲ್ಲಿ ಭತ್ಯೆ, ರಜಾ ಸೌಲಭ್ಯ ನೀಡುವಂತೆ ಈಗಾಗಲೇ ಆರೋಗ್ಯ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಹೊರಗುತ್ತಿಗೆ ನೌಕರರು ಜೀತ ಪದ್ಧತಿಯಂತೆ ದುಡಿಯಬೇಕಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯಲು ಅರ್ಹರಾಗಿರುತ್ತಾರೆ. ನೌಕರರಿಗೆ ಕನಿಷ್ಠ ವೇತನ ಪಾವತಿಯಾಗುತ್ತಿಲ್ಲ. ಸಕಾಲಕ್ಕೆ ಸಂಬಳ ನೀಡದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಕ್ರಮಕೈಗೊಳ್ಳಲಾಗಿದೆ. ಸಂಘಟಿತರಾಗಿ ಹೋರಾಟದ ಮೂಲಕ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಸಲಹೆ ಮಾಡಿದರು.
ಹೊರಗುತ್ತಿಗೆ ನೌಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಕ್ಷಯ್ ಡಿ.ಎಂ.ಗೌಡ, ಪದಾಧಿಕಾರಿಗಳಾದ ಬಿ.ಸಿದ್ದಪ್ಪ, ಕಿರಣ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.