ADVERTISEMENT

ಮೋಹನ್ ಭಾಗವತರ ಸಿ.ಕೆ.ಪುರ ನಂಟು!

ಕೆ.ಆರ್.ಜಯಸಿಂಹ
Published 21 ಡಿಸೆಂಬರ್ 2019, 10:30 IST
Last Updated 21 ಡಿಸೆಂಬರ್ 2019, 10:30 IST
ಪಾವಗಡ ತಾಲ್ಲೂಕು ಸಿ.ಕೆ.ಪುರಕ್ಕೆ ಅಟಾಲ್ ಬಿಹಾರಿ ವಾಜಪೇಯಿ ಬಂದಿದ್ದ ಚಿತ್ರ.
ಪಾವಗಡ ತಾಲ್ಲೂಕು ಸಿ.ಕೆ.ಪುರಕ್ಕೆ ಅಟಾಲ್ ಬಿಹಾರಿ ವಾಜಪೇಯಿ ಬಂದಿದ್ದ ಚಿತ್ರ.   

ಪಾವಗಡ: ತಾಲ್ಲೂಕಿನ ಸಿ.ಕೆ.ಪುರ ಗ್ರಾಮದ ನಾಗೇಶ್ ರಾವ್ ಕುಟುಂಬವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಚಾಲಕ ಮೋಹನ್ ಭಾಗವತ್ ಭೇಟಿ ಮಾಡಿ ಎರಡು ದಿನ ವಾಸ್ತವ್ಯ ಹೂಡಿದ್ದರು.

ತಲೆಮಾರುಗಳಿಂದ ದೇಶ ಸೇವೆ, ಸಂಘಕ್ಕಾಗಿ ಕುಟುಂಬ ಸದಸ್ಯರ ಸರ್ವಸ್ವವನ್ನೂ ಪರಿತ್ಯಾಗ ಮಾಡಿರುವುದೇ ಸಂಘದ ಪ್ರಮುಖರು ಗಡಿ ಭಾಗದ ಹಳ್ಳಿಯೊಂದರ ಕುಟುಂಬದವರನ್ನು ಭೇಟಿ ಮಾಡಲು ಬಂದಿರುವ ಪ್ರಮುಖ ಕಾರಣ.

ದಿವಂಗತ ನಾಗೇಶ್ ರಾವ್, ರಾಮರಾವ್ ಅವರು ಸಂಘದ ಪ್ರಚಾರಕರಾಗಿದ್ದರು. ಇವರಿಬ್ಬರ ಮಾರ್ಗದರ್ಶನದಿಂದ ಇವರ ಮಕ್ಕಳಾದ ನರೇಂದ್ರ ಅವರು ಪೂರ್ವ ಕರ್ನಾಟಕದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಹ ಸಂಚಾಲಕರಾಗಿ ಸಿ.ಆರ್.ಮುಕುಂದ ಸಂಘದ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಕುಟುಂಬದ ಬಹುತೇಕ ಸದಸ್ಯರು ಆಸ್ತಿ, ಮನೆ, ಮಠ ತ್ಯಜಿಸಿ ಆರ್‌ಎಸ್‌ಎಸ್‌ಗೆ ಸಮರ್ಪಣೆ ಮಾಡಿಕೊಂಡಿದ್ದಾರೆ. ಇದೂ ಮೋಹನ್ ಭಾಗವತ್ ಅವರು ಕುಟುಂಬ ಭೇಟಿ ಮಾಡಲು ಇರುವ ಪ್ರಮುಖ ಕಾರಣ.

ADVERTISEMENT

ಮೋಹನ್ ಭಾಗವತ್ ಅವರ ನೆಚ್ಚಿನ ಗುರುಗಳಾದ ಮಾಜಿ ಪ್ರಧಾನಿ ಅಟಾಲ್ ಬಿಹಾರಿ ವಾಜಪೇಯಿ ಅವರು 1977ರಲ್ಲಿ ಸಿ.ಕೆ.ಪುರದ ಮನೆಗೆ ಬಂದಿದ್ದರು. ನೆಚ್ಚಿನ ಗುರುಗಳು ಭೇಟಿ ಮಾಡಿದ ಕುಟುಂಬವನ್ನು ನೋಡಬೇಕೆಂಬ ಹಂಬಲವೂ ಸಿ.ಕೆ.ಪುರಕ್ಕೆ ಅವರು ಬರಲು ಪ್ರೇರಣೆ ಎಂದು ಮೂಲಗಳು ತಿಳಿಸಿವೆ.

‘ಕೆಲ ತಿಂಗಳುಗಳ ಹಿಂದೆ ಮಹಾನವಮಿ ಉತ್ಸವಕ್ಕೆ ಕುಟುಂಬದ ಸದಸ್ಯರನ್ನು ನಾಗಪುರಕ್ಕೆ ಕರೆಸಿಕೊಳ್ಳಲಾಗಿತ್ತು. ಆಗ ಮೋಹನ್ ಭಾಗವತ್ ಅವರು ಕುಟುಂಬವನ್ನು ಭೇಟಿ ಮಾಡುವುದಾಗಿ ತಿಳಿಸಿದ್ದರು. ಅವರು ಮನೆಗೆ ಬಂದಿರುವುದು ಸಂತಸ ತಂದಿದೆ’ ಎಂದು ಕುಟುಂಬ ಸದಸ್ಯ ಅಜಯ್ ನಾಗೇಶ್ ಪ್ರಜಾವಾಣಿಗೆ ತಿಳಿಸಿದರು.

ಬುಧವಾರ ಗ್ರಾಮಕ್ಕೆ ಬಂದ ಅವರು ಗ್ರಾಮ ವಿಕಾಸ ಕಾರ್ಯಕ್ರಮದಲ್ಲಿ ಗ್ರಾಮ ವಿಕಾಸ ಕಾರ್ಯಕರ್ತರು, ಗ್ರಾಮಸ್ಥರು ನಡೆಸಿಕೊಟ್ಟ ಜನಪದ ಕಾರ್ಯಕ್ರಮ ವೀಕ್ಷಿಸಿದರು. ಚನ್ನಕೇಶವ ದೇಗುಲದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಗುರುವಾರ ಕುಟುಂಬಕ್ಕೆ ಸೇರಿದ ಜ್ಞಾನ ವಾಹಿನಿ ಶಾಲೆಗೆ ಭೇಟಿ ನೀಡಿ ಮಕ್ಕಳಿಂದ ಭಗವದ್ಗೀತೆ ಶ್ಲೋಕಗಳನ್ನು ಆಲಿಸಿದರು. ಶನೈಶ್ಚರ ದೇಗುಲದಲ್ಲಿ ದರ್ಶನ ಪಡೆದು ಇತಿಹಾಸ ಲೇಖಕ ವಿ.ಆರ್.ಚೆಲುವರಾಜನ್ ಅವರಿಂದ ದೇಗುಲದ ಇತಿಹಾಸದ ಮಾಹಿತಿ ಪಡೆದರು.

***

ಕುಟುಂಬ ಸದಸ್ಯರ ತ್ಯಾಗ, ಸಂಘಕ್ಕಾಗಿ ಮಾಡಿದ ಸೇವೆಯಿಂದ ಸರ ಸಂಚಾಲಕರಾದ ಮೋಹನ್ ಭಾಗವತ್ ಅವರು ಮನೆಗೆ ಬಂದಿದ್ದಾರೆ. ಅವರ ಆಗಮನದಿಂದ ಇಡೀ ಕುಟುಂಬ ಸದಸ್ಯರು, ಸುತ್ತಮುತ್ತಲ ಜನತೆಗೆ ಸಂತೋಷವಾಗಿದೆ.

ಆನಂದರಾವ್, ಸಿ.ಕೆ.ಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.