ADVERTISEMENT

ಸಿದ್ಧಾರ್ಧ ವೈದ್ಯಕೀಯ ಶಿಕ್ಷಣ ಸಂಸ್ಥೆ; ₹ 4.7 ಕೋಟಿ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 10:56 IST
Last Updated 16 ಅಕ್ಟೋಬರ್ 2019, 10:56 IST
ಸಿದ್ದಾರ್ಥ ಆಸ್ಪತ್ರೆ (ಪ್ರಾತಿನಿಧಿಕ ಚಿತ್ರ)
ಸಿದ್ದಾರ್ಥ ಆಸ್ಪತ್ರೆ (ಪ್ರಾತಿನಿಧಿಕ ಚಿತ್ರ)   

ತುಮಕೂರು: ನಗರದ ಶಿವಶ್ರೀ ಸೌಹಾರ್ದ ಸಹಕಾರ ಸಂಸ್ಥೆಯಲ್ಲಿ ಸಿದ್ಧಾರ್ಧ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹೆಸರಿನಲ್ಲಿ ಠೇವಣಿ ಇಟ್ಟಿದ್ದ ₹ 4.7 ಕೋಟಿಯನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಅಖಿಲ ಭಾರತ ಕೋಟಾದಡಿ ಹಂಚಿಕೆ ಆಗಬೇಕಿದ್ದ ವೈದ್ಯಕೀಯ ಸೀಟುಗಳನ್ನು ಅಕ್ರಮವಾಗಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಆ ಹಣವನ್ನು ಬೇನಾಮಿಯಾಗಿ ಠೇವಣಿ ಇಟ್ಟರೇ ಎನ್ನುವ ಪ್ರಶ್ನೆ ಮೂಡಿದೆ. ಸಹಕಾರ ಸಂಸ್ಥೆ ತುಮಕೂರಿನಲ್ಲಿ ಮೂರು ಮತ್ತು ಬೆಂಗಳೂರಿನಲ್ಲಿ ಒಂದು ಶಾಖೆ ಹೊಂದಿದೆ.

ಈ ಠೇವಣಿ ಹಣದ ಬಡ್ಡಿಯನ್ನು ಆನಂದ್ ಪಡೆಯುತ್ತಿದ್ದರು ಎನ್ನಲಾಗುತ್ತಿದೆ. ನಗರದ ಯಾವ ಯಾವ ಬ್ಯಾಂಕುಗಳಲ್ಲಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಶಾಸಕ ಜಿ.ಪರಮೇಶ್ವರ ಮತ್ತು ಅವರ ಅಣ್ಣನ ಮಗ ಆನಂದ್ ವ್ಯವಹಾರ ನಡೆಸಿದ್ದಾರೆ ಎನ್ನುವ ಬಗ್ಗೆಯೂ ಐ.ಟಿ ಮಾಹಿತಿ ಕಲೆ ಹಾಕಿದೆ.

ADVERTISEMENT

ಆನಂದ್, ಶಿವಶ್ರೀ ಸಹಕಾರ ಸಂಸ್ಥೆಯಲ್ಲಿ ₹ 6.7 ಕೋಟಿ ಸಾಲ ಸಹ ಪಡೆದಿದ್ದಾರೆ. ಸಾಲಕ್ಕೆ ಬೆಂಗಳೂರಿನ ಸದಾಶಿವನಗರದಲ್ಲಿನ ಮನೆ ಮತ್ತು ಎಂ.ಜಿ.ರಸ್ತೆಯಲ್ಲಿನ ವಾಣಿಜ್ಯ ಸಂಕೀರ್ಣವನ್ನು ಆಧಾರವಾಗಿಟ್ಟಿದ್ದಾರೆ. ವಾಣಿಜ್ಯ ಸಂಕೀರ್ಣದ ಬಾಡಿಗೆ ನೇರವಾಗಿ ಸಾಲಕ್ಕೆ ಜಮೆ ಆಗುವಂತೆ ಮಾಡಿದ್ದಾರೆ ಎನ್ನುತ್ತವೆ ಮೂಲಗಳು.

‘ಸಿದ್ಧಾರ್ಧ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ವೈದ್ಯಕೀಯ ಸೀಟು ಮಾರಾಟ ನಡೆಯುತ್ತಿದೆ ಎಂದು ಒಂದು ವರ್ಷದ ಹಿಂದೆಯೇ ದೂರು ಬಂದಿತ್ತು. ಆಗ ಪರಮೇಶ್ವರ ಸಚಿವರಾಗಿದ್ದರು’ ಎನ್ನುತ್ತವೆ ಪೊಲೀಸ್ ಉನ್ನತ ಮೂಲಗಳು.

‘ವೈದ್ಯಕೀಯ ಶಿಕ್ಷಣ ಸಂಸ್ಥೆಯ ವ್ಯವಹಾರಗಳನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಇದರಲ್ಲಿ ಚಿಕ್ಕಪ್ಪನ ಪಾತ್ರ ಇಲ್ಲ’ ಎಂದು ಆನಂದ್ ಐ.ಟಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ವಿಚಾರಣೆಗಳು ನಡೆಯುತ್ತಿದ್ದರೆ ಆನಂದ್ ಮಾತ್ರ ವಿದೇಶದಲ್ಲಿ ಇದ್ದಾರೆ!

‘ಅವರು ಶೀಘ್ರದಲ್ಲಿಯೇ ವಾಪಸ್ ಆಗಲಿದ್ದು ವಿಚಾರಣೆ ಎದುರಿಸಲಿದ್ದಾರೆ’ ಎನ್ನುತ್ತವೆ ಆನಂದ್ ಆಪ್ತ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.