ADVERTISEMENT

ಪಾವಗಡ: ನಾಗಲಮಡಿಕೆ ಡ್ಯಾಂ ಸುರಕ್ಷತೆಯೇ ಚಿಂತೆ

ಕೆ.ಆರ್.ಜಯಸಿಂಹ
Published 17 ಮಾರ್ಚ್ 2021, 3:57 IST
Last Updated 17 ಮಾರ್ಚ್ 2021, 3:57 IST
ಪಾವಗಡ ತಾಲ್ಲೂಕು ನಾಗಲಮಡಿಕೆ ಚೆಕ್ ಡ್ಯಾಂ ಬಳಿ ನೆರೆದಿರುವ ಜನತೆ
ಪಾವಗಡ ತಾಲ್ಲೂಕು ನಾಗಲಮಡಿಕೆ ಚೆಕ್ ಡ್ಯಾಂ ಬಳಿ ನೆರೆದಿರುವ ಜನತೆ   

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ಚೆಕ್ ಡ್ಯಾಂ ತುಂಬಿ ಪ್ರೇಕ್ಷಣೀಯ ಸ್ಥಳವಾಗಿ ಮಾರ್ಪಟ್ಟಿದೆ. ಈವರೆಗೆ ಪುರಸಭೆ, ಗ್ರಾಮ ಪಂಚಾಯಿತಿಯವರು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಶನಿವಾರ ಯುವಕ ಮೃತಪಟ್ಟಿದ್ದಾನೆ.

ಆಂಧ್ರ ಪ್ರದೇಶದ ವಿವಿಧ ಸ್ಥಳಗಳು, ತಾಲ್ಲೂಕು ಸೇರಿದಂತೆ ಎಲ್ಲೆಡೆಯಿಂದ ಸಾವಿರಾರು ಮಂದಿ ಚೆಕ್ ಡ್ಯಾಂ, ನದಿಯಲ್ಲಿ ಹರಿಯುತ್ತಿರುವ ನೀರನ್ನು ವೀಕ್ಷಿಸಲು ಬರುತ್ತಿದ್ದಾರೆ.

ಆಂಧ್ರ ಸರ್ಕಾರ ಅಂದ್ರಿನಿವಾ ಯೋಜನೆಯಡಿ ನಾಗಲಮಡಿಕೆ ಡ್ಯಾಂಗೆ ನೀರು ಹರಿಸಿ ಇಲ್ಲಿಂದ ಆಂಧ್ರದ ಪೇರೂರು ಡ್ಯಾಂಗೆ ನೀರು ತುಂಬಿಸಲಾಗುತ್ತಿದೆ. ಇದರಿಂದ ನಾಗಲಮಡಿಕೆ ಹೋಬಳಿ ಅಂತರ್ಜಲ ಹೆಚ್ಚುತ್ತದೆ ಎಂಬ ಸಂತಸ ಇಲ್ಲಿನ ಜನರಲ್ಲಿದೆ.

ADVERTISEMENT

ಆದರೆ ಕಳೆದ ಹಲವು ತಿಂಗಳಿಂದ ಚೆಕ್ ಡ್ಯಾಂ ನೀರಿನಿಂದ ತುಂಬಿದೆ. ಪಟ್ಟಣಕ್ಕೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಪೂರೈಸುವ ಹೊಣೆ ಪುರಸಭೆ ಅಧಿಕಾರಿಗಳದ್ದು.

ಹತ್ತಾರು ಅಡಿ ಆಳವಿರುವ ಡ್ಯಾಂ ನೀರಿನೊಳಗೆ ಮಕ್ಕಳು, ಯುವಕರು, ಮಹಿಳೆಯರು ಯಾವುದೇ ಅಡೆತಡೆ ಇಲ್ಲದೆ ಇಳಿಯುತ್ತಾರೆ. ಮೇಲಿನಿಂದ ದುಮುಕುವುದು, ನೀರಿನಲ್ಲಿ ಮುಳುಗಿಸುವುದು ಇತ್ಯಾದಿ ಕುಚೇಷ್ಟೆ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯಿತಿ, ಪುರಸಭೆ ಅಧಿಕಾರಿಗಳು ನೀರು ಸಂಗ್ರಹವಾಗಿರುವ ಚೆಕ್‌ಡ್ಯಾಂ ಬಳಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ. ಚೆಕ್ ಡ್ಯಾಂ ಮಧ್ಯದಲ್ಲಿರುವ ಪಂಪ್‌ಹೌಸ್ ಬಳಿ ಸಾರ್ವಜನಿಕರು ಹೋಗದಂತೆ ನಿಷೇಧಿಸಿಲ್ಲ. ಅಪಾಯಕಾರಿ ಪ್ರದೇಶದಲ್ಲಿ ತಂತಿ ಬೇಲಿ ನಿರ್ಮಿಸಿದಲ್ಲಿ ಅಮೂಲ್ಯ ಜೀವಗಳನ್ನು ಉಳಿಸಬಹುದು.

ಡ್ಯಾಂನಿಂದ ಕೆಳಗೆ ಹರಿಯುವ ನೀರಿನಲ್ಲಿ ಸ್ನಾನ ಮಾಡಿದಲ್ಲಿ ಯಾವುದೇ ತೊಂದರೆ ಇಲ್ಲ. ಇಲ್ಲಿ ಹೆಚ್ಚು ಆಳವಿರುವುದಿಲ್ಲ. ನೀರಿನ ಹರಿವಿನ ಪ್ರಮಾಣ ಕಡಿಮೆ ಇರುತ್ತದೆ. ಆದರೆ ಆಳವಾದ ಡ್ಯಾಂ ತಡೆಗೋಡೆ ಮೇಲೆ ಓಡಾಡುವುದು, ಚೆಲ್ಲಾಟ ಆಡುವುದು ಸಾವಿಗೆ ಆಹ್ವಾನ ನೀಡಿದಂತೆಯೇ ಸರಿ.

ಶನಿವಾರ, ಭಾನುವಾರ, ಹಬ್ಬ ಹರಿದಿನ ವಿಶೇಷ ದಿನಗಳಂದು ಬರುವ ಹೆಚ್ಚಿನ ಸಂಖ್ಯೆಯ ಜನರನ್ನು ಚೆಕ್‌ಡ್ಯಾಂ ಒಳಗೆ ಈಜಾಡದಂತೆ ಕ್ರಮವಹಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.