ತುಮಕೂರು: ಅಳಿವಿನ ಅಂಚಿನಲ್ಲಿದ್ದ, ಶಿಥಿಲಾವಸ್ಥೆಗೆ ತಲುಪಿದ್ದ, ಮಳೆ ಬಂದರೆ ತೊಟ್ಟಿಕ್ಕುತ್ತಿದ್ದ, ಸುಣ್ಣ–ಬಣ್ಣವಿಲ್ಲದೆ ಅಂದ ಕಳೆದುಕೊಂಡಿದ್ದ ಶಾಲೆಗಳಿಗೆ ನರೇಗಾ ಯೋಜನೆ ಜೀವ ತುಂಬಿದೆ. ಯೋಜನೆಯಡಿ ಜಿಲ್ಲೆಯಲ್ಲಿ ಶಾಲಾಭಿವೃದ್ಧಿಗೆ ವರ್ಷದಲ್ಲಿ ₹122 ಕೋಟಿ ವ್ಯಯಿಸಲಾಗಿದೆ.
ಶಾಲೆಗಳ ಸಮಗ್ರ ಅಭಿವೃದ್ಧಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಬಲ ತಂದುಕೊಟ್ಟಿದೆ. ಜಿಲ್ಲೆಯ ಸಾವಿರಾರು ಶಾಲೆಗಳಿಗೆ ಕಾಯಕಲ್ಪ ನೀಡಲಾಗಿದೆ. 2024–25ನೇ ಸಾಲಿನಲ್ಲಿ 3,660 ಶಾಲಾಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು.
906 ಆಟದ ಮೈದಾನ, 1,360 ಕಾಂಪೌಂಡ್, 1,394 ಶೌಚಾಲಯ ನಿರ್ಮಿಸಲಾಗಿದೆ. ಮತ್ತಷ್ಟು ಶಾಲೆಗಳ ದುರಸ್ತಿಗೆ ಯೋಜನೆ ರೂಪಿಸಲಾಗಿದೆ. ಶಾಲಾಭಿವೃದ್ಧಿ ಕಾಮಗಾರಿಗಳಿಂದ ಹೆಚ್ಚಿನ ಮಾನವ ದಿನಗಳ ಸೃಜನೆ ಸಾಧ್ಯವಾಗಿದೆ. ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ಜಾರಿಗೊಳಿಸಿದ ನರೇಗಾ ಯೋಜನೆ ಬಡವರ ಬದುಕು ಬೆಳಗುತ್ತಿದೆ.
ಕಳೆದ ಆರ್ಥಿಕ ವರ್ಷದಲ್ಲಿ ಶಾಲಾಭಿವೃದ್ಧಿ ಕಾಮಗಾರಿಗಳಿಂದ ಒಟ್ಟು 3.32 ಲಕ್ಷ ಮಾನವ ದಿನ ಸೃಜಿಸಲಾಗಿದೆ. ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚಿನ ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆ ಮೊದಲ ಸ್ಥಾನ ಪಡೆದಿದೆ. ರಾಜ್ಯ ಮಟ್ಟದ ಪ್ರಶಸ್ತಿಯೂ ಲಭಿಸಿದೆ. ಬರ ಪೀಡಿತ ತಾಲ್ಲೂಕುಗಳ ಜನರ ಬದುಕು ಹಸನಾಗಿಸುವುದರ ಜತೆಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಯೋಜನೆ ಸಹಕಾರಿಯಾಗಿದೆ.
ಕ್ರೀಡೆಯ ಆಸಕ್ತಿ: ಗ್ರಾಮೀಣ ಭಾಗದ ಬಹುತೇಕ ಶಾಲೆಗಳಲ್ಲಿ ಅಭ್ಯಾಸಕ್ಕೆ ಪೂರಕವಾದ ಆಟದ ಮೈದಾನವಿಲ್ಲದೆ ಮಕ್ಕಳು ಕ್ರೀಡೆಗಳಿಂದ ಹಿಮ್ಮುಖವಾಗುತ್ತಿದ್ದರು. ಕೊಠಡಿಗಳಿಗೆ ಸೀಮಿತವಾಗಿದ್ದರು. ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿದರೂ, ಅಭ್ಯಾಸಕ್ಕೆ ಮೈದಾನವಿಲ್ಲದೆ ಶಾಲೆಗಳಲ್ಲಿಯೇ ಉಳಿಯುತ್ತಿದ್ದರು.
ಜಿಲ್ಲಾ ಪಂಚಾಯಿತಿ ಅಗತ್ಯ ಇರುವ ಶಾಲೆಗಳನ್ನು ಗುರುತಿಸಿ ಒಟ್ಟು 906 ಕಡೆಗಳಲ್ಲಿ ಮೈದಾನ ಅಭಿವೃದ್ಧಿ ಪಡಿಸಲಾಗಿದೆ. ವಾಲಿಬಾಲ್, ಥ್ರೋಬಾಲ್, ಬ್ಯಾಡ್ಮಿಂಟನ್, ಕಬಡ್ಡಿ ಅಂಕಣ ಸಿದ್ಧವಾಗಿದೆ. ಇದರಿಂದ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ.
ಶಾಲೆ ಆವರಣಗಳು ರಾತ್ರಿ ಸಮಯದಲ್ಲಿ ಅನೈತಿಕ ಚಟುವಟಿಕೆ ತಾಣಗಳಾಗುತ್ತಿದ್ದವು. ಇದನ್ನು ತಡೆಯುವುದು ಶಿಕ್ಷಕರಿಗೂ ಸವಾಲಾಗಿತ್ತು. ನರೇಗಾ ಯೋಜನೆಯಡಿ ಕಾಂಪೌಂಡ್ ನಿರ್ಮಿಸಿದ ನಂತರ ಶಾಲಾ ಆವರಣದಲ್ಲಿ ಪುಂಡರ ಹಾವಳಿ ತಪ್ಪಿದೆ. ಹಿಂದೆ ಮದ್ಯದ ಬಾಟಲಿಗಳು ಆವರಣದಲ್ಲಿಯೇ ಎಸೆದು ಹೋಗುತ್ತಿದ್ದರು. ಈಗ ಎಲ್ಲ ಚಟುವಟಿಕೆ ನಿಯಂತ್ರಣಕ್ಕೆ ಬಂದಿವೆ.
ಹೊಸ ಪರಿಕಲ್ಪನೆ
ದುಡಿಯುವ ಕೈಗೆ ಕೂಲಿ ಕೊಡುವುದರ ಜತೆಗೆ ಸ್ಥಳೀಯ ಸಂಪನ್ಮೂಲ ಅಭಿವೃದ್ಧಿಯ ಪರಿಕಲ್ಪನೆಯೊಂದಿಗೆ ನರೇಗಾದಲ್ಲಿ ಕೆಲಸ ಮಾಡಲಾಗುತ್ತಿದೆ. ಸಮಗ್ರ ಶಾಲಾಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ನರೇಗಾ ವಿವೇಕ ಯೋಜನೆ ಜಿಲ್ಲಾ ಪಂಚಾಯಿತಿ ಅನುದಾನದಡಿ ಶಾಲೆಯ ಚಿತ್ರಣವೇ ಬದಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ವಿಶ್ವಾಸದ ಮಾತುಗಳನ್ನಾಡಿದರು. ಕಳೆದ ಒಂದು ವರ್ಷದಲ್ಲಿ ₹122 ಕೋಟಿ ನರೇಗಾ ಯೋಜನೆ ₹52 ಕೋಟಿ ವಿವೇಕ ಯೋಜನೆ ₹45 ಕೋಟಿ ಜಿಲ್ಲಾ ಪಂಚಾಯಿತಿ ಅನುದಾನ ಮತ್ತು ಇತರೆ ಇಲಾಖೆಗಳ ಅನುದಾನ ಸೇರಿ ಸುಮಾರು ₹250 ಕೋಟಿ ಹಣ ಶಾಲೆಗಳ ಅಭಿವೃದ್ಧಿಗೆ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.
1200 ಕೊಠಡಿ ದುರಸ್ತಿ ಗುರಿ
ಜಿಲ್ಲೆಯ ಶಾಲೆಗಳಲ್ಲಿ 600 ಹೊಸ ಕೊಠಡಿಗಳ ಅಗತ್ಯವಿದೆ. ನರೇಗಾ ಹೊರೆತುಪಡಿಸಿ ಇತರೆ ಯೋಜನೆಗಳಲ್ಲಿ ಇದುವರೆಗೆ 400 ಕೊಠಡಿ ನಿರ್ಮಿಸಲಾಗಿದೆ. ಈ ವರ್ಷ ಉಳಿದ 200 ಕೊಠಡಿಗಳ ನಿರ್ಮಾಣ ಕಾರ್ಯ ನಡೆಯಲಿದೆ. ಎರಡು ಶೈಕ್ಷಣಿಕ ಜಿಲ್ಲೆಗಳ 15 ಸಾವಿರ ಕೊಠಡಿಗಳ ಪೈಕಿ 1900 ಕೊಠಡಿ ದುರಸ್ತಿಗೆ ಕಾಯುತ್ತಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1200 ಕೊಠಡಿ ದುರಸ್ತಿಯ ಗುರಿ ಹೊಂದಲಾಗಿದೆ. ಅಂಗನವಾಡಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಜಿ.ಪಂ ಯೋಜನೆ ರೂಪಿಸಿದೆ. ಈಗಾಗಲೇ 90 ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದ್ದು 120 ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಶಾಲಾಭಿವೃದ್ಧಿ ಸಂಕಲ್ಪ
ಈ ಬಾರಿಯೂ 42 ಲಕ್ಷ ಮಾನವ ದಿನ ಸೃಜನೆಯ ಗುರಿ ನಿಗದಿಪಡಿಸಲಾಗಿದೆ. ಶಾಲೆಗಳ ಸಂಪೂರ್ಣ ಅಭಿವೃದ್ಧಿಗೆ ಸಂಕಲ್ಪ ತೊಡಲಾಗಿದೆ. ಬಾಕಿ ಉಳಿದಿರುವ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಜಿ.ಪಂ ಮುಂದಾಗಿದೆ. ಮುಂದಿನ ಒಂದು ವರ್ಷದಲ್ಲಿ 984 ಶೌಚಾಲಯ 810 ಆಟದ ಮೈದಾನ 1231 ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಎಲ್ಲ ಕಾಮಗಾರಿಗಳು ನಿಗದಿತ ಸಮಯಕ್ಕೆ ಶುರುವಾಗಿ ಸಕಾಲಕ್ಕೆ ಪೂರ್ಣಗೊಂಡರೆ ಶಾಲೆಗಳ ಹಲವು ವರ್ಷಗಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಮೂಲಭೂತ ಸೌಲಭ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ವಿವಿಧ ಕಾಮಗಾರಿ ನಡೆಸಲಾಗಿದೆ. ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಕಾಂಪೌಂಡ್ ಆಟದ ಮೈದಾನ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.– ಬಿ.ಶಾಲಿನಿ, ಅಧ್ಯಕ್ಷೆ ಗ್ರಾಮ ಪಂಚಾಯಿತಿ ಯಡಿಯೂರು
ಆಟದ ಮೈದಾನ ಕಾಂಪೌಂಡ್ ನಿರ್ಮಿಸಿದ ನಂತರ ಶಾಲೆಯ ದಾಖಲಾತಿ ಹೆಚ್ಚಾಗಿದೆ. ಈ ಹಿಂದೆ ಶಾಲಾ ಆವರಣ ಕುಡುಕರ ಅಡ್ಡೆಯಾಗಿತ್ತು. ಈಗ ಎಲ್ಲ ರೀತಿಯಿಂದಲೂ ಬದಲಾವಣೆ ಕಂಡಿದೆ. ವಾಲಿಬಾಲ್ ಕೊಕ್ಕೊ ಮೈದಾನದಲ್ಲಿ ಸದಾ ಮಕ್ಕಳ ಕಲವರ ಕಾಣಿಸುತ್ತದೆ.– ಕೆ.ಎಸ್.ಕಿರಣ್, ಸದಸ್ಯ ಗ್ರಾಮ ಪಂಚಾಯಿತಿ ಕೆಸ್ತೂರು
ಆವರಣದಲ್ಲಿ ಮಕ್ಕಳ ಓಡಾಟ ಕಷ್ಟವಾಗುತ್ತಿತ್ತು. ಮಳೆ ಬಂದರೆ ಆವರಣದಲ್ಲಿ ಕೆಸರು ತುಂಬಿಕೊಳ್ಳುತಿತ್ತು. ಈಗ ಮೈದಾನದ ವ್ಯವಸ್ಥೆ ಮಾಡಲಾಗಿದೆ. ಶಾಲಾಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮ ರೂಪಿಸಲಾಗಿದೆ. ಮಕ್ಕಳ ಕಲಿಕೆಗೆ ನೆರವಾಗಿದೆ.– ರಮೇಶ್ ಕುಮಾರ್, ಮುಖ್ಯ ಶಿಕ್ಷಕ ಸರ್ಕಾರಿ ಶಾಲೆ ಕಾಳಂಜಿಹಳ್ಳಿ ತುರುವೇಕೆರೆ
ಆಟದ ಮೈದಾನ ನಿರ್ಮಿಸಿರುವುದರಿಂದ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ. ಈಗ ಶಾಲೆಯ ಮಕ್ಕಳ ಅಭ್ಯಾಸಕ್ಕೆ ಮೈದಾನ ನೆರವಾಗುತ್ತಿದೆ.– ಶಿವಪ್ರಸಾದ್, ಕಬಡ್ಡಿ ಕ್ರೀಡಾಪಟು ಕೆಸ್ತೂರು
ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಲೆ ಪಕ್ಕದಲ್ಲಿ ಶೌಚಾಲಯ ಕಾಂಪೌಂಡ್ ನಿರ್ಮಿಸಲಾಗಿದೆ. ಇದರ ಜತೆಗೆ ಬ್ಯಾಡ್ಮಿಂಟನ್ ಕೊಕ್ಕೊ ಅಂಕಣ ಸಿದ್ಧಪಡಿಸಲಾಗಿದೆ. ಶಾಲೆಯ ಸಮಗ್ರ ಅಭಿವೃದ್ಧಿಗೆ ನರೇಗಾ ನೆರವಿನ ಹಸ್ತ ಚಾಚಿದೆ.– ಕಲಾವತಿ, ಎಸ್‌ಡಿಎಂಸಿ ಅಧ್ಯಕ್ಷೆ ಕೊಡಿಗೇನಹಳ್ಳಿ
ಶೌಚಾಲಯ ನಿರ್ಮಾಣದಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಅನುಕೂಲವಾಗಿದೆ. ನರೇಗಾ ಯೋಜನೆಯಡಿ ಶಾಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ.– ನಾರಾಯಣಪ್ಪ, ಶಿಕ್ಷಕ ಕಣಿವೇನಹಳ್ಳಿ ಪಾವಗಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.