ADVERTISEMENT

ತುಮಕೂರು: ಮಾರ್ಚ್ 15ಕ್ಕೆ ಹೊಸ ಬಸ್ ನಿಲ್ದಾಣ ಆರಂಭ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 14:29 IST
Last Updated 13 ಫೆಬ್ರುವರಿ 2024, 14:29 IST

ತುಮಕೂರು: ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಿಸುತ್ತಿರುವ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದಿಂದ ಮಾರ್ಚ್ 15ರ ಒಳಗೆ ಬಸ್‌ಗಳ ಸಂಚಾರ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

₹111.25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನಿಲ್ದಾಣ ಕಾಮಗಾರಿಯನ್ನು ಮಂಗಳವಾರ ಪರಿಶೀಲಿಸಿದರು. ಬಾಕಿ ಉಳಿದಿರುವ ಸಣ್ಣ ಪುಟ್ಟ ಕೆಲಸಗಳನ್ನು ಪೂರ್ಣಗೊಳಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಸ್ ನಿಲ್ದಾಣ ಉದ್ಘಾಟಿಸಿದ್ದರು. ನಿಲ್ದಾಣಕ್ಕೆ ದೇವರಾಜ ಅರಸು ಹೆಸರು ನಾಮಕರಣ ಸಹ ಮಾಡಿದ್ದರು. ಉದ್ಘಾಟನೆ ಸಮಯದಲ್ಲಿ ಕಾಮಗಾರಿ ಪೂರ್ಣಗೊಂಡಿರಲಿಲ್ಲ.

ADVERTISEMENT

ರಿಂಗ್ ರಸ್ತೆ: ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ನಗರದ ದಿಬ್ಬೂರು ಜಂಕ್ಷನ್‍ನಿಂದ ಶಿರಾಗೇಟ್‍ ವರೆಗಿನ 1.5 ಕಿ.ಮೀ ದೂರದ ರಿಂಗ್ ರಸ್ತೆ ಕಾಮಗಾರಿ ನಿಧಾನವಾಗಿರುವುದಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಕಾಮಗಾರಿ ಚುರುಕುಗೊಳಿಸಬೇಕು. ಈ ಬಗ್ಗೆ ಪ್ರತಿ ದಿನವೂ ವರದಿ ಸಲ್ಲಿಸುವಂತೆ ಟೂಡಾ ಆಯುಕ್ತೆ ಬಸಂತಿ ಅವರಿಗೆ ನಿರ್ದೇಶಿಸಿದರು.

ಮಾಹಿತಿ ನೀಡಿದ ಲೋಕೋಪಯೋಗಿ ಎಂಜಿನಿಯರ್ ಸಿದ್ದಪ್ಪ, ‘ಕಳೆದ ವರ್ಷ ಮಳೆಯಿಂದಾಗಿ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ. ₹9.60 ಕೋಟಿಯಲ್ಲಿ ರಸ್ತೆ, ₹4 ಕೋಟಿ ಮೊತ್ತದಲ್ಲಿ ಸೇತುವೆ ಕಾಮಗಾರಿ ಕೈಗೊಳ್ಳಲಾಗಿದೆ. ಇನ್ನೆರಡು ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.