ADVERTISEMENT

ಹುಟ್ಟಿದ ಮಗು ಮಾತಾಡುತ್ತಂತೆ, ಮಲಗಿದ್ದವರ ಪ್ರಾಣ ತೆಗೆಯುತ್ತದೆ: ಹೀಗೊಂದು ಸುದ್ದಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2020, 5:20 IST
Last Updated 27 ಮಾರ್ಚ್ 2020, 5:20 IST
ಗಾಳಿ ಸುದ್ದಿ ಕೇಳಿ ಒಂದೆಡೆ ಸೇರಿದ್ದ ಜನರು
ಗಾಳಿ ಸುದ್ದಿ ಕೇಳಿ ಒಂದೆಡೆ ಸೇರಿದ್ದ ಜನರು   

ಕೊಡಿಗೇನಹಳ್ಳಿ (ಮಧುಗಿರಿ): ಹುಟ್ಟಿರುವ ಮಗು ಮಾತಾಡುತ್ತಂತೆ, ಮಲಗಿರುವವರ ಪ್ರಾಣ ತೆಗೆದುಕೊಂಡು ಹೋಗುತ್ತಂತೆ ಅದಕ್ಕೆ ಯಾರು ನಿದ್ದೆ ಮಾಡಬೇಡಿ ಎಂಬ ಗಾಳಿ ಸುದ್ದಿ ಎಲ್ಲ ಕಡೆ ಹಬ್ಬಿ ಹಲವು ಗ್ರಾಮಗಳಲ್ಲಿನ ಜನರು ತಾವು ನಿದ್ದೆ ಮಾಡದೆ ಇತರರನ್ನು ಎಬ್ಬಿಸಿ ಜಾಗರಣೆ ಮಾಡಿರುವ ಅಪರೂಪದ ಘಟನೆ ನಡೆದಿದೆ.

ಶುಕ್ರವಾರ ಮುಂಜಾನೆ 4 ರಿಂದ 5 ಗಂಟೆಯೊಳಗೆ ಮಧುಗಿರಿ ತಾಲ್ಲೂಕಿನ ಹಲವು ಗ್ರಾಮಗಳ ಮನೆಗಳಲ್ಲಿನ ಮೊಬೈಲ್‌ಗಳಿಗೆ ನೆಂಟರು ಮತ್ತು ಸಂಬಂಧಿಕರು ಕರೆ ಮಾಡಿ ಆಂಧ್ರಪ್ರದೇಶದ ಹಳ್ಳಿಯೊಂದರಲ್ಲಿ ವಿಚಿತ್ರ ಮಗುವೊಂದು ಹುಟ್ಟಿದೆಯಂತೆ, ಆ ಮಗು ಮಾತಾಡುತ್ತಂತೆ ಮತ್ತು ಯಾರು ನಿದ್ದೆ ಮಾಡುತ್ತಾರೋ ಅಂತವರ ಪ್ರಾಣ ತೆಗೆದುಕೊಂಡು ಹೋಗುತ್ತಂತೆ ಎಂಬ ವಿಚಿತ್ರ ವಿಷಯ ತಿಳಿಸಿದ್ದಾರೆ. ಜತೆಗೆ ಹಲವು ಮೊಬೈಲ್‌ಗಳಲ್ಲಿ ವಿಚಿತ್ರ ಮಗುವಿನ ಪೋಟೋ ಮತ್ತು ವಿಡಿಯೊಗಳು ಹರಿದಾಡಿವೆ. ಈ ವಿಷಯ ಒಬ್ಬರಿಂದ ಮೊತ್ತೊಬ್ಬರಿಗೆ ಹಬ್ಬಿ ಗಾಬರಿಗೊಂಡ ಹಲವು ಗ್ರಾಮಗಳಲ್ಲಿನ ಜನರು ಅಲ್ಲಲ್ಲಿ ಗುಂಪು ಕೂಡಿಕೊಂಡು ಬೆಳಗಾಗುವರೆಗೆ ಎಚ್ಚರವಾಗಿದ್ದಾರೆ.

ಇದರ ಜೊತೆಗೆ ಗಂಡು ಮಕ್ಕಳು ಮತ್ತು ಚಿಕ್ಕಮಕ್ಕಳಿರುವ ಮನೆಗಳಲ್ಲಿ ಮಕ್ಕಳಿಗೆ ಮುಖ ತೊಳಸಿ ಮನೆಯ ಮುಖ್ಯ ದ್ವಾರದ ಹೊಸಲನ್ನು ತೊಳೆದು ಅದಕ್ಕೆ ಅರಶಿನ-ಕುಂಕುಮ ಹಚ್ಚಿ, ಕೆಂಪು ನೀರು ಮಾಡಿ ಅದರ ಮೇಲೆ ತಮ್ಮ ಮಕ್ಕಳನ್ನು ಕುಳ್ಳರಿಸಿ ಪೂಜೆ ನಂತರ ಮೂರು ರಸ್ತೆ ಸೇರುವ ಜಾಗದಲ್ಲಿ ಬಿಟ್ಟರೆ ದೋಷ ಪರಿಹಾರ ಆಗುತ್ತದೆ. ಇಲ್ಲವಾದರೆ ಪ್ರಾಣಕ್ಕೆ ತೊಂದರೆಯಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಹೀಗಾಗಿ ಹಲವು ಗ್ರಾಮಗಳಲ್ಲಿನ ತಾಯಂದಿರು ಸೂರ್ಯ ಹುಟ್ಟುವ ಮುಂಚೆಯೇ ಪೂಜೆ ಸಲ್ಲಿಸಿ ದಾರಿಯಲ್ಲಿ ಕೆಂಪು ನೀರು ಹಾಕುತ್ತಿರುವುದು ಕಂಡು ಬಂದಿತು. ದೇಶದಲ್ಲಿ ಈಗಾಗಲೇ ಕೊರೊನಾ ವೈರಸ್ ಎಂಬ ಮಹಾಮಾರಿ ಜನರನ್ನು ಆತಂಕಕ್ಕೆ ಈಡು ಮಾಡಿ ನಿದ್ದೆಗೆಡಿಸಿದ್ದರೆ, ಶುಕ್ರವಾರ ಮುಂಜಾನೆ ಇಂತಹ ಸುದ್ದಿ ಜನರನ್ನು ಮತ್ತಷ್ಟು ಕಂಗೆಡುವಂತೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.