ತಿಪಟೂರು: ನಗರದ ಕಲ್ಪತರು ಸಭಾಂಗಣದಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಅಂಗನವಾಡಿ ಮತ್ತು ಸಹಾಯಕಿಯರ ಸಂಘದಿಂದ ಪೋಷಣಾ ಮಾಸಾಚರಣೆ ನಡೆಯಿತು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ತಾಯಂದಿರ ಪೌಷ್ಟಿಕ ಆಹಾರ ಸೇವನೆ ಕೊರತೆಯಿಂದ ಶಿಶುಗಳು ದುರ್ಬಲರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅಪೌಷ್ಟಿಕತೆಯ ವಿರುದ್ಧ ಅರಿವು ಮತ್ತು ಜೀವನಶೈಲಿಯ ಬದಲಾವಣೆ ಅಗತ್ಯ ಎಂದರು.
ಕೊನೆಹಳ್ಳಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸುಮನ ಮಾತನಾಡಿ, ಮನುಷ್ಯನಿಗೆ ಕಾಲಕಾಲಕ್ಕೆ ತಕ್ಕಂತೆ ದೇಹದ ಅಗತ್ಯತೆ ಅನುಗುಣವಾಗಿ ಆಹಾರ ಸೇವನೆ ಮುಖ್ಯ. ಋತುವಿಗೆ ಅನುಗುಣವಾಗಿ ಹಿತಮಿತವಾಗಿ ಹಣ್ಣು, ಹಂಪಲು ಸೇವನೆಯಿಂದ ದೇಹ ಮತ್ತು ಮನಸ್ಸು ಸದೃಢವಾಗಲು ಸಹಕಾರಿಯಾಗುತ್ತದೆ ಎಂದರು.
ಆಹಾರದಷ್ಟೇ ನಿದ್ರೆಯೂ ಮುಖ್ಯ. ದಿನನಿತ್ಯ ಉಪಯೋಗಿಸುವ ಸುತ್ತಮುತ್ತಲಿನ ಸಸ್ಯಾಧಾರಿತ ವಸ್ತುಗಳು ಔಷಧೀಯ ಗುಣಗಳನ್ನು ಹೊಂದಿದ್ದು ಅವುಗಳ ಉಪಯೋಗವನ್ನು ತಿಳಿದು ಬಳಸಿ ಎಂದು ಸಲಹೆ ನೀಡಿದರು.
ನಗರಸಭೆ ಅಧ್ಯಕ್ಷೆ ಮೇಘಶ್ರೀ ಭೂಷಣ್ ಮಾತನಾಡಿ, ಸದೃಢ ದೇಶ ನಿರ್ಮಿಸಲು ಗರ್ಭಿಣಿ ಮಹಿಳೆಯ ಆಹಾರ ಪದ್ಧತಿ ಮುಖ್ಯ. ಅಪೌಷ್ಟಿಕತೆ ಹೋಗಲಾಡಿಸಲು ಅಂಗನವಾಡಿ ಕಾರ್ಯಕರ್ತೆಯ ಪಾತ್ರ ಮುಖ್ಯ ಎಂದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪ ಹೆಬ್ಬಳಿ ಮಾತನಾಡಿ, ತಾಯಂದಿರ ಆರೋಗ್ಯವೇ ಮಕ್ಕಳ ಭವಿಷ್ಯ, ಹಾಗಾಗಿ ಪೌಷ್ಟಿಕ ಆಹಾರ ಸೇವನೆ ಹಾಗೂ ಆಯುರ್ವೇದ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.
12 ಮಂದಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರನ್ನು ಸತ್ಕರಿಸಲಾಯಿತು.
ತಹಶೀಲ್ದಾರ್ ಮೋಹನ್‌ಕುಮಾರ್, ಸಹಾಯಕ ಅಭಿವೃದ್ಧಿ ಯೋಜನೆ ಅಧಿಕಾರಿ ಮೀನಾಕ್ಷಿ ಭಟ್ಟೂರು, ಮಾತೃವಂದನಾ ಸಂಯೋಜಕ ಶಶಿಧರ್, ನಿರೂಪಣಾಧಿಕಾರಿ ಅಂಬಿಕ, ಶಿವಗಂಗಮ್ಮ ಷಡಕ್ಷರಿ, ಪ್ರಭ ವಿಶ್ವನಾಥ್, ಅನುಸೂಯಮ್ಮ, ಆರ್ಥಿಕ ಸಾಕ್ಷರತಾ ಸಮಾಲೋಚಕಿ ರೇಖಾ, ರಶ್ಮಿ, ಮೇಲ್ವಾಚಾರಕಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.