ಕುಣಿಗಲ್: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುತ್ತಿದ್ದು, ಒಕ್ಕಲಿಗರು ಉಪಜಾತಿ ಬರೆಸುವಂತೆ ಒಕ್ಕಲಿಗ ಧರ್ಮ ಮಹಾಸಭಾ ಅಧ್ಯಕ್ಷ ಅರೇಶಂಕರ ಮಠಾಧ್ಯಕ್ಷ ಸಿದ್ದರಾಮ ಚೈತನ್ಯ ಸ್ವಾಮೀಜಿ ಸಲಹೆ ನೀಡಿದರು.
ಗಂಗಡಕಾರ್, ಮರಸು, ದಾಸ ಒಕ್ಕಲಿಗ ಪ್ರತಿಷ್ಠಾನದ ಸಹಯೋಗದಲ್ಲಿ ಪಟ್ಟಣದಲ್ಲಿ ಬುಧವಾರ ನಡೆದ ಒಕ್ಕಲಿಗ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಕ್ಕಲಿಗರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಮೀಸಲಾತಿ ನೀಡುತ್ತಿದ್ದರೂ, ಸಂಬಂದಪಟ್ಟವರು ಜನಜಾಗೃತಿ ಮೂಡಿಸದ ಕಾರಣ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ‘3ಎ’ ಕ್ಯಾಟಗರಿಯಲ್ಲಿ ಶೇ 4ರಷ್ಟು ಮೀಸಲಾತಿ ಬರುತ್ತಿದ್ದು, ಒಕ್ಕಲಿಗ ಸಮುದಾಯದ ಏಳು ಉಪ ಜಾತಿಗಳಿಗೆ ಕೇಂದ್ರ ಸರ್ಕಾರ ಆರ್ಥಿಕ ದುರ್ಬಲ ವಿಭಾಗದಲ್ಲಿ ಶೇ 10 ಮೀಸಲಾತಿ ನೀಡುತ್ತಿದೆ. ಉಪಜಾತಿ ಸಹಿತ ಪ್ರಮಾಣ ಪತ್ರವಿರದ ಕಾರಣ ಕಳೆದ ಹತ್ತು ವರ್ಷದಿಂದ ಮೀಸಲಾತಿಯಿಂದ ವಂಚಿತರಾಗಿ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸಮೀಕ್ಷೆ ವೇಳೆ ಒಕ್ಕಲಿಗರು ಉಪಜಾತಿಯೊಂದಿಗೆ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಂತರಾಜು ಆಯೋಗದ ವರದಿಯಲ್ಲಿ ಗಂಗಡಕಾರ್ ಒಕ್ಕಲಿಗರು 81 ಸಾವಿರ, ಮರಸು ಒಕ್ಕಲಿಗರನ್ನು 3,859, ದಾಸ ಒಕ್ಕಲಿಗರ ಸಂಖ್ಯೆ 25 ಸಾವಿರ ಎಂದು ತಪ್ಪು ಮಾಹಿತಿ ನೀಡಲಾಗಿದೆ. ಉಪಜಾತಿ ಬರಸಿದರೆ ಒಟ್ಟಾರೆ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಭಯ ಬಿಟ್ಟು ಉಪಜಾತಿ ಬರೆಸಲು ಮನವಿ ಮಾಡಿದರು.
ಮಹಾಸಭಾದ ಬ.ನ.ರವಿ, ತಾಲ್ಲೂಕಿನಲ್ಲಿ ಒಕ್ಕಲಿಗರೆ ಹೆಚ್ಚಾಗಿದ್ದು, ಇದುವರೆಗೂ ಆಯ್ಕೆಯಾದ ಜನಪ್ರತಿನಿಧಿಗಳು ಬಹುತೇಕ ಒಕ್ಕಲಿಗರಾಗಿದ್ದರೂ, ಜನಜಾಗೃತಿ ಮೂಡಿಸಿ ಮೀಸಲಾತಿ ಸೌಲಭ್ಯ ಕಲ್ಪಿಸಲು ವಿಫಲರಾಗಿದ್ದಾರೆ. ಚುನಾವಣೆ ಬಂದಾಗ ಮಾತ್ರ ಕ್ರಿಯಾಶೀಲರಾಗುವ ರಾಜಕಾರಣಿಗಳು ಜಾತಿವಾರು ಮೀಸಲಾತಿ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಲು ವಿಫಲರಾಗಿದ್ದಾರೆ ಎಂದು ದೂರಿದರು.
ಧರ್ಮ ಮಹಾಸಭಾ ಅಧ್ಯಕ್ಷ ಬಿ.ಕೆ.ರಾಮಣ್ಣ, ಪದಾಧಿಕಾರಿಗಳಾದ ತರಿಕೆರೆ ಪ್ರಕಾಶ್, ಆನಂದ್, ಜಯಲಕ್ಷ್ಮೀ ಶೋಭಾ, ಲಕ್ಷ್ಮೀ ದೇವಿ, ಬಾಲು, ಸುಮತಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.