ADVERTISEMENT

ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿ

ಇದೇ ಮೊದಲ ಬಾರಿಗೆ ತುಮಕೂರಿನಲ್ಲಿ ಯಶಸ್ವಿ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 2:11 IST
Last Updated 20 ಜನವರಿ 2021, 2:11 IST
ರೋಗಿಯೊಂದಿಗೆ ಡಾ.ಜಿ.ಪರಮೇಶ್ವರ ಹಾಗೂ ವೈದ್ಯರ ತಂಡ
ರೋಗಿಯೊಂದಿಗೆ ಡಾ.ಜಿ.ಪರಮೇಶ್ವರ ಹಾಗೂ ವೈದ್ಯರ ತಂಡ   

ತುಮಕೂರು: ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ‘ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ನಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿದ್ದು, ಯಶಸ್ವಿಯಾಗಿದೆ.

ತುಮಕೂರು ತಾಲ್ಲೂಕಿನ ಮರಳೇನಹಳ್ಳಿ ರೈತ ರಂಗಸ್ವಾಮಿ (60) ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಪಾಸಣೆ ನಡೆಸಿ, ಇಸಿಜಿ ಮಾಡಿದಾಗ ಲಘು ಹೃದಯಾಘಾತವಾಗಿರುವುದು ಖಚಿತವಾಗಿದೆ. ಮೂರು ಮುಖ್ಯ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ. ಜ. 16ರಂದು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಕೇವಲ ಮೂರು ದಿನಗಳಲ್ಲೇ ಚೇತರಿಸಿಕೊಂಡಿದ್ದಾರೆ.

ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್ ಮೇಲ್ವಿಚಾರಕ ಡಾ.ತಮಿಮ್ ಅಹಮದ್ ನೇತೃತ್ವದ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆ ನಡೆಸಿದೆ. ಡಾ.ನವೀನ್, ಡಾ.ಸುರೇಶ್, ಡಾ.ಆಶಿತ್ ಕಾಮತ್, ಡಾ.ನಾಗಾರ್ಜುನ, ವಿವೇಕ್, ಜಾನ್, ಡಾ.ನಿಖಿತ ತಂಡದಲ್ಲಿ ಇದ್ದರು.

ADVERTISEMENT

ವೈದ್ಯರ ಸಾಧನೆ: ತುಮಕೂರು ಸುತ್ತಮುತ್ತಲಿನ ಜಿಲ್ಲೆಗಳ ಯಾವ ಆಸ್ಪತ್ರೆಗಳಲ್ಲೂ ಈವರೆಗೂ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಯತ್ನ ನಡೆದಿದ್ದು, ಯಶಸ್ಸು ಸಿಕ್ಕಿದೆ. ಹೃದ್ರೋಗ ಕೇಂದ್ರ ಆರಂಭಿಸಿದ ಮೂರು ತಿಂಗಳಲ್ಲೇ ವೈದ್ಯರು ಈ ಸಾಧನೆ ಮಾಡಿದ್ದಾರೆ ಎಂದು ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಜಿ.ಪರಮೇಶ್ವರ ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಪ್ರಶಂಸೆ ವ್ಯಕ್ತಪಡಿಸಿದರು.

ಗ್ರಾಮಾಂತರ ಪ್ರದೇಶದ ಜನರಿಗೆ ಕಡಿಮೆ ದರದಲ್ಲಿ ಹೃದಯ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟ ಹೊಂದಿದಹೃದ್ರೋಗ ಕೇಂದ್ರವನ್ನಾಗಿ ರೂಪಿಸಲಾಗುವುದು. ಕೇಂದ್ರ ಪ್ರಾರಂಭವಾದ ಮೂರು ತಿಂಗಳಲ್ಲೇ 20 ಮಂದಿಗೆ ಆ್ಯಂಜಿಯೊ ಪ್ಲಾಸ್ಟಿ ಮಾಡಲಾಗಿದೆ. ಬಡವರಿಗೆ ಹೆಚ್ಚು ಸಬ್ಸಿಡಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಕೇಂದ್ರ ಆರಂಭಿಸಲು ಸುಮಾರು ₹16 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.