
ಐಪಿಎಲ್
ತುಮಕೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಮೇ 24ರಂದು ನಡೆಯುವ ಪ್ಲೇಆಫ್ಸ್ ಹಾಗೂ ಮೇ 26ರಂದು ನಡೆಯುವ ಫೈನಲ್ ಪಂದ್ಯವನ್ನು ನಗರದ ಕ್ರಿಕೆಟ್ ಪ್ರೇಮಿಗಳು ಬೃಹತ್ ಪರದೆಯ ಮೇಲೆ ವೀಕ್ಷಿಸಬಹುದಾಗಿದೆ.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಎಲ್‌ಇಡಿ ಪರದೆಯ ಮೇಲೆ ಕ್ರಿಕೆಟ್ ಪಂದ್ಯಾವಳಿ ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ತುಮಕೂರು ಘಟಕದ ಉಸ್ತುವಾರಿ ಸುನಿಲ್ ಪಟೇಲ್ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.
32X18 ಅಡಿ ಅಳತೆಯ ಬೃಹತ್ ಪರದೆಯ ಮೇಲೆ ಪಂದ್ಯಾವಳಿಯ ನೇರ ಪ್ರಸಾರ ಮಾಡಲಾಗುತ್ತದೆ. ಸುಮಾರು ನಾಲ್ಕು ಸಾವಿರ ಜನರು ಕುಳಿತು ಪಂದ್ಯ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಅಂಗವಿಕಲರು, ಹಿರಿಯ ನಾಗರಿಕರು, ಗರ್ಭಿಣಿಯರಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಪಂದ್ಯಾವಳಿಯ ವಿರಾಮದ ಸಮಯದಲ್ಲಿ ಡಿಜೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಎಲ್ಲರಿಗೂ ಉಚಿತ ಪ್ರವೇಶ ಅವಕಾಶ ಕಲ್ಪಿಸಲಾಗಿದೆ. ಶುಕ್ರವಾರ ಹಾಗೂ ಭಾನುವಾರ ಸಂಜೆ 6.30 ಗಂಟೆಗೆ ಕಾಲೇಜು ಮೈದಾನಕ್ಕೆ ಪ್ರವೇಶ ನೀಡಲಾಗುತ್ತದೆ. ಮಕ್ಕಳು, ದೊಡ್ಡವರಿಗೆ ಮನರಂಜನಾ ಆಟ, ತಿಂಡಿ ತಿನಿಸುಗಳ ಮಳಿಗೆ ಇರಲಿವೆ. ವೀಕ್ಷಣೆಗೆ ಬರುವವರಿಗೆ ಲಕ್ಕಿ ಕೂಪನ್ ನೀಡಲಾಗುತ್ತದೆ. ವಿಜೇತರಿಗೆ ಪ್ರಮುಖ ಕ್ರಿಕೆಟ್ ಆಟಗಾರರು ಸಹಿ ಮಾಡಿರುವ ಟೀ ಶರ್ಟ್ ವಿತರಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಬಿಸಿಸಿಐ ಪ್ರತಿನಿಧಿ ಆನಂದ್ ದತ್ತಾಲ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.