ತುಮಕೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸದನದಲ್ಲೇ ಆರ್‌ಎಸ್‌ಎಸ್ ಗೀತೆ ಹಾಡಿ ವಿವಾದಕ್ಕೆ ಸಿಲುಕಿದ ಬಳಿಕ, ಎಬಿವಿಪಿ ಹಮ್ಮಿಕೊಂಡಿದ್ದ ಮೆರವಣಿಗೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಭಾಗಿಯಾಗಿರುವುದು ಗಮನ ಸೆಳೆದಿದೆ.
ವೀರ ರಾಣಿ ಅಬ್ಬಕ್ಕ ಅವರ 500ನೇ ಜಯಂತಿ ಪ್ರಯುಕ್ತ ರಥಯಾತ್ರೆಯನ್ನು ಎಬಿವಿಪಿ ರಾಜ್ಯದಾದ್ಯಂತ ಹಮ್ಮಿಕೊಂಡಿದೆ. ತಿಪಟೂರಿನಲ್ಲಿ ಮಂಗಳವಾರ ರಾತ್ರಿ ಪಂಜಿನ ಮೆರವಣಿಗೆಯಲ್ಲಿ ರಥಯಾತ್ರೆ ಸಾಗುತ್ತಿದ್ದಾಗ ಪರಮೇಶ್ವರ ಪಾಲ್ಗೊಂಡಿದ್ದರು.
ತಿಪಟೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತೆರಳುತ್ತಿದ್ದ ಸಮಯದಲ್ಲಿ ಪಂಜಿನ ಮೆರವಣಿಗೆ ಬರುತ್ತಿರುವುದನ್ನು ಸಚಿವರು ಗಮನಿಸಿದ್ದಾರೆ. ನಂತರ ಸಚಿವರು ಕಾರಿನಿಂದ ಇಳಿದು, ಶಾಸಕ ಕೆ.ಷಡಕ್ಷರಿ ಜತೆಯಲ್ಲಿ ರಥಯಾತ್ರೆ ಬಳಿಗೆ ತೆರಳಿದ್ದಾರೆ.
ಮೆರವಣಿಗೆಯಲ್ಲಿ ಒಯ್ಯುತ್ತಿದ್ದ ರಾಣಿ ಅಬ್ಬಕ್ಕ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದಾರೆ. ಸ್ಥಳದಲ್ಲಿದ್ದ ಪ್ರಮುಖರ ಜತೆ ಕೆಲಕಾಲ ಮಾತುಕತೆ ನಡೆಸಿ ವಾಪಸಾಗಿದ್ದಾರೆ.
‘ಮಾಹಿತಿ ಇಲ್ಲ’
ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಯಾರೆಲ್ಲಾ ಹುದ್ದೆ ಹಾಗೂ ಜವಾಬ್ದಾರಿ ತೆಗೆದುಕೊಂಡಿದ್ದಾರೊ ಅವರು ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡಬೇಕು ಎಂದು ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕಾರ್ಯಕರ್ತರಾಗಿ, ಪಕ್ಷದ ಪದಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡವರು ಅದಕ್ಕಾಗಿ ಸಮಯ ಮೀಸಲಿಡಬೇಕು – ಡಿ.ಕೆ. ಶಿವಕುಮಾರ್, ಡಿಸಿಎಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.