ADVERTISEMENT

ಪಾವಗಡ | ಸಕಾಲದಲ್ಲಿ ಬೀಳದ ಮಳೆ: ಇಳುವರಿ ಕುಂಠಿತ

ಕೆ.ಆರ್.ಜಯಸಿಂಹ
Published 10 ಅಕ್ಟೋಬರ್ 2025, 5:40 IST
Last Updated 10 ಅಕ್ಟೋಬರ್ 2025, 5:40 IST
   

ಪಾವಗಡ: ತಾಲ್ಲೂಕಿನ ಮಳೆಯಾಧಾರಿತ ಪ್ರದೇಶದಲ್ಲಿ ಬಿತ್ತನೆ ಮಾಡಲಾದ ಶೇಂಗಾ ಬೆಳೆ ಸಕಾಳದಲ್ಲಿ ಮಳೆ ಬೀಳದ ಕಾರಣ ಸಂಪೂರ್ಣ ಒಣಗಿದೆ.

ಬುಧವಾರ ರಾತ್ರಿ ಅಲ್ಪ ಪ್ರಮಾಣದಲ್ಲಿ ಬಿದ್ದ ಮಳೆಯಿಂದ ಶೇಂಗಾ ಬೆಳೆಗೆ ಯಾವುದೇ ಪ್ರಯೋಜನವಾಗಿಲ್ಲ. ಈಗಾಗಲೇ ಕಟಾವು ಹಂತದಲ್ಲಿರುವುದರಿಂದ, ಎಲೆಗಳು ಒಣಗಿದ್ದು, ಅಲ್ಪ ಪ್ರಮಾಣದ ಮಳೆಯಿಂದ ಬಳ್ಳಿ ಕೊಳೆಯುವ ಸಾಧ್ಯತೆ ಇದೆ. ತಾಲ್ಲೂಕಿನ ಕೆಲವೆಡೆ ಮಾತ್ರ ಭೂಮಿ ಮೆದುವಾಗುವಷ್ಟು ಮಳೆಯಾಗಿದೆ. ಉಳಿದಂತೆ ಹಲವೆಡೆ ತುಂತುರು ಮಳೆಯಾಗಿದೆ.

ಆರಂಭದಿಂದಲೂ ಈ ವರ್ಷ ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆ ಶೇಂಗಾ ಇಳುವರಿ ಕುಂಠಿತವಾಗಿದೆ. ಈಗ ಮಳೆಯಾದರೂ ಬೆಳೆ ಕೈಗೆಟಕುವುದಿಲ್ಲ. ಒಣಗಿರುವ ಗಿಡಗಳನ್ನು ಕಟಾವು ಮಾಡಲೂ ಸಾಧ್ಯವಾಗುವುದಿಲ್ಲ. ಒಣಗಿರುವ ಗಿಡಗಳು ಕೊಳೆತು ಹೋಗುವ ಜೊತೆಗೆ ರೋಗ ಬಂದಲ್ಲಿ ಬುಡ ಮತ್ತು ಗಿಡವನ್ನು ಬೇರ್ಪಡಿಸಲೂ ಸಾದ್ಯವಾಗುವುದಿಲ್ಲ. ಇದರಿಂದ ಮೇವೂ ಸಹ ಸಿಗುವುದಿಲ್ಲ, ಭೂಮಿಯಲ್ಲಿ ಸೇರಿಕೊಂಡ ಶೇಂಗಾವನ್ನು ಮಡಿಕೆ ಹೊಡೆದು ಕೂಲಿಯವರಿಂದ ಶೇಖರಿಸುವ ಅನಿವಾರ್ಯತೆ ಇದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಬಿತ್ತನೆ ಬೀಜ, ಗೊಬ್ಬರ, ಕೂಲಿ, ಕಳೆ ತೆಗೆಸುವುದು, ಕುಂಟೆ ಸೇರಿ ಪ್ರತಿ ಎಕರೆಗೆ ₹35 ಸಾವಿರದಿಂದ ₹40 ಸಾವಿರ ಖರ್ಚಾಗಿದೆ. ಇತ್ತೀಚೆಗೆ ಬಿಸಿಲು, ತಾಪಮಾನ ಹೆಚ್ಚಿ ಗಿಡಗಳು ವೇಗವಾಗಿ ಒಣಗುತ್ತಿವೆ ಎಂದು ರೈತರು ಅಳಲು ತೋಡಿಕೊಂಡರು.

ಕೆ.ಟಿ. ಹಳ್ಳಿ, ದೇವಲಕೆರೆ, ರಾಮಯ್ಯನಪಾಳ್ಯ, ಅರಸೀಕೆರೆ, ಮಂಗಳವಾಡ ಸೇರಿದಂತೆ ನಿಡಗಲ್‌ ಹೋಬಳಿಯ ಬಹುತೇಕ ಪ್ರದೇಶದಲ್ಲಿ ಜೂನ್‌, ಜುಲೈನಲ್ಲಿ ಬಿತ್ತನೆ ಮಾಡಿರುವ ಬೆಳೆ ಕಟಾವು ಹಂತದಲ್ಲಿದ್ದು, ಟ್ರಾಕ್ಟರ್‌ಗಳಲ್ಲಿ ಮಡಿಕೆ ಹೊಡೆದು ಶೇಂಗಾ ಆಯ್ದುಕೊಳ್ಳಲಾಗುತ್ತಿದೆ. ಒಂದು ಗಿಡದಲ್ಲಿ 2ರಿಂದ 4 ಕಾಯಿಗಳು ಮಾತ್ರ ಕಟ್ಟಿವೆ.

ಟ್ರಾಕ್ಟರ್‌ ಮೂಲಕ ಶೇಂಗಾ ಕಟಾವು ಮಾಡಿದರೂ ಬಾಡಿಗೆ ಹಣವೂ ಹುಟ್ಟುವುದಿಲ್ಲ, ಆದರೂ ಹಾಗೆ ಬಿಡಬಾರದು ಸಿಕ್ಕಷ್ಟು ಸಿಗಲಿ ಎಂದು ಕಟಾವು ಮಾಡಿಲಾಗುತ್ತಿದೆ ಎನ್ನುತ್ತಾರೆ ದಂಡಾಪಾಳ್ಯ ರಾಮಾಂಜಿನೇಯ.

ವೈ.ಎನ್‌. ಹೊಸಕೋಟೆ ಹೋಬಳಿಯ ಲಿಂಗದಹಳ್ಳಿ, ಸಾಸಲಕುಂಟೆ, ಕೆಂಚಮ್ಮನಹಳ್ಳಿ ಭಾಗದಲ್ಲಿಯೂ ಇದೇ ಸ್ಥಿತಿ ಇದೆ. ಸಂಪೂರ್ಣ ಒಣಗಿ ಶೇಂಗಾ ಎಲೆಗಳು ಉದುರುತ್ತಿವೆ. ಬಹುತೇಕ ರೈತರು ಕಟಾವು ಮಾಡಿದರೂ ಪ್ರಯೋಜನವಿಲ್ಲ ಎಂದು ಜಮೀನಿನಲ್ಲಿಯೇ ಬೆಳೆ ಬಿಡುತ್ತಿದ್ದಾರೆ. ಕುರಿ, ಮೇಕೆಯವರಿಗೆ ಮೇಯಿಸಿಕೊಳ್ಳಲು ಹೇಳುತ್ತಿದ್ದಾರೆ.

ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ಸಾಲ  ಮಾಡಿ ಶೇಂಗಾ ಬಿತ್ತಿ ಕೈ ಸುಟ್ಟುಕೊಂಡು ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ, ತಾಲ್ಲೂಕು ಆಡಳಿತ ಆಸರೆಯಾಗಲಿದೆಯೇ ಎಂದು ತಾಲ್ಲೂಕಿನ ರೈತರು ಆಸೆಗಣ್ಣುಗಳಿಂದ ಎದುರು ನೋಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.