ಪಾವಗಡ: ತಾಲ್ಲೂಕಿನ ಸಂಕಾಪುರದಲ್ಲಿ ಟಿ.ಎಸ್. ಗೋಪಾಲ್ ವಿರಚಿತ ‘ದೇಗುಲ ಶಿಲ್ಪ ಕೌಶಲ’, ‘ಭವ್ಯ ಶಿಲ್ಪದ ದಿವ್ಯಪಥ’ ಪುಸ್ತಕಗಳನ್ನು ಶಾಸನ ತಜ್ಞ ಮತ್ತು ಇತಿಹಾಸ ಸಂಶೋಧಕ ಪಿ.ವಿ. ಕೃಷ್ಣಮೂರ್ತಿ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಪಿ.ವಿ. ಕೃಷ್ಣಮೂರ್ತಿ, ಪ್ರಾಚೀನ ದೇಗುಲಗಳ ಶಿಲ್ಪಕಲೆ ಇತಿಹಾಸದ ಜೊತೆಗೆ ಸಂಸ್ಕೃತಿಯನ್ನೂ ಪರಿಚಯಿಸುತ್ತದೆ. ಶಿಲ್ಪಕಲೆ ಕಲ್ಲು, ಲೋಹ ಅಥವಾ ಇತರ ವಸ್ತುಗಳಿಂದ ಆಕೃತಿಗಳನ್ನು ಕೆತ್ತಿ ರೂಪಿಸುವ ಕಲೆ. ಇದು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಭಾವನೆಗಳನ್ನು ಅನಾವರಣಗೊಳಿಸುತ್ತದೆ. ಶಿಲ್ಪಕಲೆಗೆ ಸುದೀರ್ಘ ಇತಿಹಾಸವಿದೆ. ಎಲ್ಲೋರಾ, ಅಜಂತಾ, ಬಾದಾಮಿ, ಐಹೊಳೆ, ಬೇಲೂರು, ಹಳೇಬೀಡು ಸೇರಿದಂತೆ ಬಹುತೇಕ ದೇಗುಲಗಳಲ್ಲಿ ಶಿಲ್ಪಕಲೆ ಗತಕಾಲದ ವೈಭವವನ್ನು ಸಾರುತ್ತದೆ ಎಂದು ತಿಳಿಸಿದರು.
ಟಿ.ಎಸ್. ಗೋಪಾಲ್ ಬರೆದ ದೇಗುಲ ಶಿಲ್ಪಕೌಶಲ ಮತ್ತು ಭವ್ಯಶಿಲ್ಪದ ದಿವ್ಯಪಥ ಎರಡು ಪುಸ್ತಕಗಳು ಶಿಲ್ಪಕಲೆ ಸೇರಿದಂತೆ ದೇಗುಲಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿ. ದೇವಾಲಯ ಸಂಸ್ಕೃತಿಯನ್ನು ಉಳಿಸುವಲ್ಲಿ ಇಂತಹ ಪುಸ್ತಕಗಳು ಸಹಕಾರಿ ಎಂದರು.
ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ಬಳಗದ ಅಧ್ಯಕ್ಷ ಗಣಪತಿ ಭಟ್, ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ, ಎಂ.ಎಸ್. ವಿಶ್ವನಾಥ್, ಲೇಖಕ ಟಿ.ಎಸ್. ಗೋಪಾಲ್, ಕೆಂಗೇರಿ ಚಕ್ರಪಾಣಿ, ಎಂ.ಡಿ. ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.