
ಕೊಡಿಗೇನಹಳ್ಳಿ: ‘ದಿನ ಬೆಳಗಾದರೆ ಈ ಪಂಚಾಯಿತಿಯಿಂದ ನೂರಾರು ದೂರು ಬರುತ್ತಿವೆ. ಒಂದೂವರೆ ವರ್ಷದಿಂದ ಇ–ಸ್ವತ್ತು ಮಾಡದೇ ಹಾಗೇ ಇಟ್ಟಿದ್ದೀರಿ. 6 ತಿಂಗಳಾದರೂ ವರ್ಕ್ ಆರ್ಡರ್ ಕೊಟ್ಟಿಲ್ಲ. ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ನಿಮಗೆ ಎಷ್ಟು ದಿನ ಬೇಕು. ಇಷ್ಟ ಬಂದಂತೆ ಬರೋಕೆ-ಹೋಗೋಕೆ ಇದೇನು ಧರ್ಮಛತ್ರನಾ’ ಎಂದು ಚಿಕ್ಕಮಾಲೂರು ಪಿಡಿಒ ದೊಡ್ಡಯ್ಯಸ್ವಾಮಿ ಅವರನ್ನು ಸಿಇಒ ಪ್ರಭು ತರಾಟೆಗೆ ತೆಗೆದುಕೊಂಡರು.
ಚಿಕ್ಕಮಾಲೂರು ಗ್ರಾಮ ಪಂಚಾಯಿತಿಗೆ ಮಂಗಳವಾರ 10.30ಕ್ಕೆ ಸಿಇಒ ಮತ್ತು ಅಧಿಕಾರಿಗಳ ತಂಡ ಭೇಟಿ ನೀಡಿದ್ದರೂ ಕೂಡ ಪಿಡಿಒ 11 ಗಂಟೆ ನಂತರ ಕಚೇರಿಗೆ ಸ್ಥಳಕ್ಕೆ ಬಂದರು.
ಕೆಂಡಮಂಡಲರಾದಸಿಇಒ, ‘ನಾವೇ ಪ್ರತಿದಿನ 9 ಗಂಟೆಗೆ ಕಚೇರಿಗೆ ಹಾಜರಾಗುತ್ತೇವೆ. ಆದರೆ ನೀನು ಪ್ರತಿದಿನ 11ರಿಂದ 12 ಗಂಟೆಗೆ ಕಚೇರಿಗೆ ಬಂದರೆ ಪ್ರಗತಿ ಸಾಧಿಸಲು ಸಾಧ್ಯನಾ. ಜಿಲ್ಲಾ ಪಂಚಾಯಿತಿಯಿಂದ 26 ಕಾಮಗಾರಿಗಳಿಗೆ ಸುಮಾರು ₹2 ಕೋಟಿಗಿಂತಲೂ ಹೆಚ್ಚು ಹಣಕ್ಕೆ ಅನುಮೋದನೆ ನೀಡಿದ್ದೇವೆ. ಆದರೆ ಪಿಡಿಒ ಮತ್ತು ಕಾರ್ಯದರ್ಶಿ ನಿರ್ಲಕ್ಷ್ಯದಿಂದ ಎಲ್ಲವು ಬಾಕಿಇದೆ’ ಎಂದರು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎಲ್ರಿ: ‘ನೀವು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ನೀವು ಕೂಡ ಮನೆಗೆ ಹೋಗುತ್ತೀರಿ. ಎಷ್ಟೋ ಕಡತಕ್ಕೆ ಅಧ್ಯಕ್ಷರ ಸಹಿ ಇಲ್ಲ. ಪಂಚಾಯಿತಿ ಅಧ್ಯಕ್ಷರು ಅಧಿಕಾರಿಗಳನ್ನು ಸರಿಯಾಗಿ ಬಳಸಿಕೊಂಡು ಕೆಲಸ ಮಾಡಿಸಿಕೊಳ್ಳುವುದು ಅವರ ಜವಾಬ್ದಾರಿ. ಇಲ್ಲಿ ಏನಾದರೂ ಲೋಪದೋಷ ಕಂಡುಬಂದರೆ ಅವರು ಕೂಡ ಹೊಣೆಗಾರರಾಗುತ್ತಾರೆ’ ಎಂದು ಎಚ್ಚರಿಕೆ ನೀಡಿದರು.
ಕಡತಗಳನ್ನು, ಕ್ರಿಯಾ ಯೋಜನೆ, ವಿವಿಧ ವಹಿಗಳನ್ನು ಪರಿಶೀಲಿಸಿದರು. ಕಡತಗಳಲ್ಲಿ ಹೆಚ್ಚು ನ್ಯೂನತೆ ಕಂಡುಬಂದಿದ್ದು, ದಾಖಲಾತಿ ಸರಿಯಾಗಿ ನಿರ್ವಹಿಸದೆ ಇರುವುದು ಕಂಡುಬಂತು.
ಕಾರ್ಯದರ್ಶಿ, ಪಿಡಿಒ ಕಾರ್ಯಲೋಪದ ಕುರಿತಂತೆ ಕೂಡಲೇ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿಯಿಂದ ಬಂದ ಅಧಿಕಾರಿಗಳಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿನೀಡಿ ಮಕ್ಕಳು ಪಾಠ ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಓದುವ ಕ್ರಮವನ್ನು ಮಕ್ಕಳಿಗೆ ತಿಳಿಸಲಾಯಿತು. ಮುಖ್ಯ ಶಿಕ್ಷಕರಿಗೆ ಮಕ್ಕಳ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಯಿತು. ಶಾಲೆಗೆ ಮೂಲ ಸೌಕರ್ಯ ಒದಗಿಸಲು ಸೂಕ್ತ ಕ್ರಮವಹಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗೆ ಸೂಚಿಸಲಾಯಿತು.
ಪುರುವರ, ತೋವಿನಕೆರೆ ಗ್ರಾಮ ಪಂಚಾಯಿತಿಗೆ ಭೇಟಿನೀಡಿ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿರುವ ಅಭಿವೃದ್ಧಿ ಕಾಮಗಾರಿ ಅನುಷ್ಠಾನದ ಕುರಿತು ನೀಲನಕ್ಷೆಯೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಯಿತು.
ಜಿಲ್ಲಾ ಪಂಚಾಯಿತಿಯ ಮಂಜುನಾಥ್, ಇಒ ಲಕ್ಷ್ಮಣ್, ಎಡಿಒ ಧನಂಜಯ್, ಮಾಜಿ ಅಧ್ಯಕ್ಷ ಎಲ್. ರಾಮಯ್ಯ, ಉಪಾಧ್ಯಕ್ಷ ಮಂಜುನಾಥ್, ಬೊಮ್ಮೇಗೌಡ, ಪಿಡಿಒ ದೊಡ್ಡಯ್ಯಸ್ವಾಮಿ, ಎಡಿಪಿಸಿ ನಂಜೇಗೌಡ ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.